ಲಾಹೋರ್: ಪಾಕಿಸ್ತಾನದಲ್ಲಿ ಕಳೆದ ವರ್ಷ ಸುಮಾರು 1100 ಮರ್ಯಾದೆಗೇಡು ಹತ್ಯೆ ಪ್ರಕರಣ ನಡೆದಿದ್ದು, ಮತ್ತೆ ಮತ್ತೆ ಮರುಕಳಿಸುತ್ತಿವೆ. ಈ ನಡುವೆ ಅಮಾನವೀಯ ಘಟನೆಯೊಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಾಲ್ ಪುರದ ಊಚ್ ಶರೀಫ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಹಿಳೆಯೊಬ್ಬಳು ಪರ ಪುರುಷನೊಂದಿಗೆ ಮನೆಬಿಟ್ಟು ಹೋಗಿದ್ದ ಕಾರಣಕ್ಕೆ, ಜನರೆದುರಲ್ಲೇ ಆಕೆಯ ತಲೆ ಬೋಳಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡುವ ಮೂಲಕ ಅಮಾನವೀಯ ವರ್ತನೆ ತೋರಲಾಗಿದೆ. ಊಚ್ ಶರೀಫ್ ಗ್ರಾಮದ ಈ ಮಹಿಳೆ ವ್ಯಕ್ತಿಯೊಬ್ಬನ ಜೊತೆ ಸಂಬಂಧ ಹೊಂದಿದ್ದು, ಆತನೊಂದಿಗೆ ಓಡಿ ಹೋಗಿದ್ದಾಳೆ. 1 ವಾರ ಕಳೆದ ನಂತರ ಗ್ರಾಮಕ್ಕೆ ವಾಪಸ್ ಆಗಿದ್ದ ಆಕೆಯನ್ನು ಪಂಚಾಯಿತಿ ಎದುರು ಕರೆದುಕೊಂಡು ಬಂದ ಕಿಡಿಗೇಡಿಗಳು ತಲೆ ಬೋಳಿಸಿದ್ದಾರೆ.
ಆಕೆ ತಪ್ಪು ಮಾಡಿದ್ದಾಳೆ ಎಂದು ತೀರ್ಮಾನ ಕೈಗೊಂಡ ಪಂಚಾಯಿತಿ ಮುಖಂಡರು ಹಾಗೂ ಕೆಲವು ಗ್ರಾಮಸ್ಥರು ಸೇರಿಕೊಂಡು ಆಕೆಯ ಕುಟುಂಬದವರು, ಸಾರ್ವಜನಿಕರ ಸಮ್ಮುಖದಲ್ಲೇ ತಲೆ ಬೋಳಿಸಿ, ಮುಖಕ್ಕೆ ಮಸಿ ಬಳಿದು ಮೆರವಣಿಗೆ ಮಾಡಿದ್ದಾರೆ.