ಗುಜರಾತ್ ನ ಗಿರ್ ರಾಷ್ಟ್ರೀಯ ಉದ್ಯಾನದಲ್ಲಿ ಕಳೆದ ಮೇ ತಿಂಗಳಲ್ಲಿ 3 ಮಂದಿಯ ಮೇಲೆ ದಾಳಿ ಮಾಡಿ ಬಲಿ ಪಡೆದಿದ್ದ ಸಿಂಹಗಳಿಗೆ ಜೀವನವಿಡೀ ಪಂಜರದಲ್ಲಿಯೇ ಇರುವಂತೆ ಮಾಡಲಾಗಿದೆ. 3 ಸಿಂಹಗಳು ತಪ್ಪು ಮಾಡಿರುವುದು ಕಂಡು ಬಂದ ಹಿನ್ನಲೆಯಲ್ಲಿ ಪಂಜರ ವಾಸ ಅನುಭವಿಸಬೇಕಿದೆ.
ರಾಷ್ಟ್ರೀಯ ಉದ್ಯಾನಕ್ಕೆ ಬಂದಿದ್ದ ಪ್ರವಾಸಿಗರ ಮೇಲೆ, ಗಿರ್ ರಾಷ್ಟ್ರೀಯ ಉದ್ಯಾನದಲ್ಲಿನ ಸಿಂಹಗಳು ದಾಳಿ ಮಾಡಿದ್ದು, ಈ ಸಂದರ್ಭದಲ್ಲಿ ಮಹಿಳೆ, ವೃದ್ಧ ಹಾಗೂ 14 ವರ್ಷದ ಬಾಲಕನೊಬ್ಬ ಸಾವು ಕಂಡಿದ್ದರು. ಈ ಉದ್ಯಾನದಲ್ಲಿದ್ದ 18 ಗಂಡು ಸಿಂಹಗಳನ್ನು ವಶಕ್ಕೆ ಪಡೆದ ಉದ್ಯಾನದ ಸಿಬ್ಬಂದಿ ಹಾಗೂ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಅದರಂತೆ 3 ಸಿಂಹಗಳು ದಾಳಿ ಮಾಡಿ, ಮೂವರನ್ನು ಬಲಿ ಪಡೆದಿರುವುದು ಕಂಡು ಬಂದಿದ್ದು, ಇವುಗಳನ್ನು ಜೀವನವಿಡೀ ಪಂಜರದಲ್ಲಿಯೇ ಇಡಲಾಗುವುದು.
ಮನುಷ್ಯನ ಮಾಂಸದ ರುಚಿ ನೋಡಿದ ಸಿಂಹಗಳು ಮತ್ತೆ, ಮತ್ತೆ ಮನುಷ್ಯರ ಮೇಲೆ ದಾಳಿ ಮಾಡಬಹುದಾದ ಸಾಧ್ಯತೆ ಇರುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜುನಘಡ ಅರಣ್ಯ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಪಿ.ಸಿಂಗ್ ತಿಳಿಸಿದ್ದು, ಸಿಂಹಗಳ ಮಲ ವಿಸರ್ಜನೆ ಸಂದರ್ಭದಲ್ಲಿ ಪರೀಕ್ಷೆ ನಡೆಸಿ ಮನುಷ್ಯರನ್ನು ಕೊಂದ ಸಿಂಹಗಳನ್ನು ಗುರುತಿಸಿದ್ದು, ಅವುಗಳನ್ನು ಪಂಜರದಲ್ಲಿಡಲಾಗುವುದು ಎಂದು ಹೇಳಿದ್ದಾರೆ.