ನವದೆಹಲಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯ ಸಚಿವ ಸಂಪುಟ ಪುನಾರಚನೆಗೆ ಮುಂದಾಗಿದ್ದು, ಈಗಾಗಲೇ ಪ್ರಕ್ರಿಯೆಗಳು ಆರಂಭವಾಗಿವೆ. ಕೆಲವು ಸಚಿವರನ್ನು ಸಂಪುಟದಿಂದ ಕೈ ಬಿಟ್ಟು, ಒಂದಿಬ್ಬರು ಹಿರಿಯರು ಹಾಗೂ ಯುವಕರಿಗೆ ಆದ್ಯತೆ ನೀಡಲಾಗುವುದೆಂದು ಹೇಳಲಾಗಿದೆ.
ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಹೈಕಮಾಂಡ್ ಜೊತೆ ಚರ್ಚಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ದೆಹಲಿಗೆ ಆಗಮಿಸಿದ್ದು, ಶುಕ್ರವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ. ರಾತ್ರಿ ಲೋಕಸಭೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಸಿ.ಎಂ. ಸುಮಾರು 2 ಗಂಟೆ ಕಾಲ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. 10ಕ್ಕಿಂತ ಹೆಚ್ಚು ಸಚಿವರನ್ನು ಸಂಪುಟದಿಂದ ತೆಗೆಯದೇ ಕೆಲವರನ್ನು ಮಾತ್ರ ತೆಗೆಯುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.
ಅಲ್ಲದೇ, ಕೆಲವು ಸಚಿವರ ಖಾತೆ ಬದಲಾವಣೆ ಮಾಡಲು ಚರ್ಚೆ ನಡೆದಿದೆ. ಸಿದ್ಧರಾಮಯ್ಯನವರು ಸೋನಿಯಾ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿದ ನಂತರ, ಯಾರು ಸ್ಥಾನ ಕಳೆದುಕೊಳ್ಳಲಿದ್ದಾರೆ. ಮತ್ಯಾರು ಸಂಪುಟಕ್ಕೆ ಸೇರಲಿದ್ದಾರೆ ಎಂಬುದು ಗೊತ್ತಾಗಲಿದೆ.
ಸೋನಿಯಾ ಗಾಂಧಿ ಅವರು, ರಾಜ್ಯ ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಆಸ್ಕರ್ ಫರ್ನಾಂಡೀಸ್ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತಿಳಿಸಲಿದ್ದಾರೆ ಎಂದು ಹೇಳಲಾಗಿದೆ. ಕೆಲವು ಸಚಿವರು, ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಸಂಪುಟದಲ್ಲಿ ಉಳಿದುಕೊಳ್ಳಲು ಮತ್ತು ಸೇರಲು ಲಾಬಿ ನಡೆಸಿದ್ದಾರೆ.