ಧಾರವಾಡ: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಯೋಗೀಶ್ ಗೌಡರನ್ನು ಕೊಲೆ ಮಾಡುವ ಬಗ್ಗೆ ಅವರಿಗೆ ಅನಾಮಧೇಯ ಪತ್ರವೊಂದು ತಲುಪಿತ್ತು ಎನ್ನಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
‘ನಮಸ್ಕಾರ ಯೋಗೀಶ್ ಗೌಡರೇ, ನಿಮ್ಮ ಅಣ್ಣ ಉದಯ ಗೌಡರನ್ನು ಕೊಲೆ ಮಾಡಿಸಿದ್ದು, ಇಬ್ಬರು ಸಚಿವರು. ಇದೀಗ, ಸಚಿವರೊಬ್ಬರು ನಿಮ್ಮ ಕೊಲೆಗೆ ಸಂಚು ರೂಪಿಸಿದ್ದಾರೆ’ ಹೀಗೆಂದು ಅನಾಮಧೇಯ ಪತ್ರವೊಂದು ಯೋಗೀಶ್ ಗೌಡರಿಗೆ ಮೊದಲೇ ಬಂದಿತ್ತು ಎನ್ನಲಾಗಿದೆ. ಅಲ್ಲದೇ, ಪತ್ರ ಬರೆದಿರುವ ವ್ಯಕ್ತಿ ನಾನು ಯಾರೆಂದು ತಿಳಿಯುವ ಪ್ರಯತ್ನ ಮಾಡಬೇಡಿ, ನಿಮಗೆ ಮುಂದೆ ಪತ್ರದ ಮೂಲಕವೇ ಮಾಹಿತಿ ಕೊಡುತ್ತೇನೆ ಎಂದು ಬರೆದಿದ್ದು, ಪತ್ರದಲ್ಲಿ ಸಚಿವರ ಹೆಸರನ್ನು ಕೂಡ ಬರೆಯಲಾಗಿದೆ.
ಬುಧವಾರ ಬೆಳಿಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡರನ್ನು ಜಿಮ್ ನಲ್ಲಿ ಹತ್ಯೆ ಮಾಡಲಾಗಿತ್ತು. ಆರೋಪಿಗಳ ಪತ್ತೆಗೆ 4 ತಂಡಗಳನ್ನು ರಚಿಸಲಾಗಿದ್ದು, ಯೋಗೀಶ್ ಗೌಡರಿಗೆ ಬಂದಿದ್ದ ಪತ್ರವನ್ನು ಕುಟುಂಬದವರು, ಪೊಲೀಸರಿಗೆ ಕೊಟ್ಟಿದ್ದಾರೆ ಎನ್ನಲಾಗಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.