ಕಳೆದ ಒಂದು ತಿಂಗಳಿನಿಂದ ಮೂರು ಬಾರಿ ಏರಿಕೆ ಕಂಡಿರುವ ಪೆಟ್ರೋಲ್- ಡಿಸೇಲ್ ದರ ಮತ್ತೊಮ್ಮೆ ಏರಿಕೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ಮತ್ತೊಂದು ಶಾಕ್ ನೀಡಿದಂತಾಗುತ್ತದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಆಧರಿಸಿ ತೈಲ ಕಂಪನಿಗಳು ಪೆಟ್ರೋಲ್- ಡಿಸೇಲ್ ದರ ಪರಿಷ್ಕರಣೆ ಮಾಡುತ್ತಿದ್ದು, ಇದೀಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆ ಹಾದಿ ಹಿಡಿದಿರುವುದರಿಂದ ಅದಕ್ಕೆ ಅನುಗುಣವಾಗಿ ಪೆಟ್ರೋಲ್ ಹಾಗೂ ಡಿಸೇಲ್ ದರದಲ್ಲಿ ಏರಿಕೆಯಾಗಲಿದೆ ಎನ್ನಲಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಭಾರೀ ಪ್ರಮಾಣದಲ್ಲಿ ಇಳಿಕೆಯಾದಾಗ ಪೈಸೆಗಳ ಲೆಕ್ಕದಲ್ಲಿ ದರ ಕಡಿಮೆ ಮಾಡಿದ್ದ ತೈಲ ಕಂಪನಿಗಳು ಏರಿಕೆ ಸಂದರ್ಭದಲ್ಲಿ ರೂಪಾಯಿ ಲೆಕ್ಕದಲ್ಲಿ ಹೊರೆ ಹೇರುತ್ತಿವೆ. ಇದೀಗ ಜೂನ್ 15 ರಂದು ಮತ್ತೊಮ್ಮೆ ತೈಲ ದರ ಪರಿಷ್ಕರಣೆಯಾಗುತ್ತಿದ್ದು, ಪೆಟ್ರೋಲ್ ಹಾಗೂ ಡಿಸೇಲ್ ದರದಲ್ಲಿ 2 ರಿಂದ 3 ರೂಪಾಯಿಯಷ್ಟು ಏರಿಕೆಯಾಗಬಹುದೆಂದು ಹೇಳಲಾಗುತ್ತಿದೆ.
ಮೇ 1 ರಂದು ಪೆಟ್ರೋಲ್ ದರದಲ್ಲಿ 1.06 ರೂ. ಏರಿಕೆಯಾಗಿದ್ದರೆ, ಮೇ 17 ರಂದು 0.83 ರೂ. ಏರಿಕೆಯಾಗಿತ್ತು. ಪುನಃ ಮೇ 31 ರಂದು ಪೆಟ್ರೋಲ್ ದರದಲ್ಲಿ 2.58 ರೂ. ಏರಿಕೆಯಾಗಿದ್ದು, ಅದೇ ರೀತಿ ಡಿಸೇಲ್ ದರ ಮೇ 1 ರಂದು 2.94 ರೂ. ಏರಿಕೆಯಾಗಿದ್ದು, ಮೇ 7 ರಂದು 0.54 ರೂ. ಇಳಿಕೆಯಾಗಿತ್ತು. ಮೇ 17 ರಂದು ಡಿಸೇಲ್ ದರದಲ್ಲಿ 1.26 ರೂ. ಏರಿಕೆಯಾಗಿದ್ದು, ಮೇ 31 ರಂದು 2.26 ರೂ. ಏರಿಕೆಯಾಗಿತ್ತು. ಇದೀಗ ಜೂನ್ 15 ರಂದು ತೈಲ ಕಂಪನಿಗಳು ಯಾವ ನಿರ್ಧಾರ ಕೈಗೊಳ್ಳುತ್ತವೆಂಬುದನ್ನು ಕಾದು ನೋಡಬೇಕಿದೆ.