ಈಗಂತೂ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಇರುತ್ತದೆ. ಕೈಯಲ್ಲಿ ಫೋನ್ ಇದ್ದರಂತೂ ಮುಗಿದೇ ಹೋಯ್ತು. ಕಂಡ ಕಂಡಲ್ಲಿ ಸೆಲ್ಫಿ ಕ್ಲಿಕ್ಕಿಸುವುದು ಈಗಂತೂ ಹೆಚ್ಚಾಗಿದೆ. ಹೀಗೆ ಪ್ರವಾಸಿಗರ ಸೆಲ್ಫಿ ಕ್ರೇಜ್ ನಿಂದ ಆನೆಗಳು ಸಂಕಷ್ಟ ಅನುಭವಿಸುವಂತಾದ ಘಟನೆಯೊಂದರ ವರದಿ ಇಲ್ಲಿದೆ.
ಉತ್ತರಾಖಂಡ್ ನ ರಾಮ್ ನಗರ ಅರಣ್ಯ ವಿಭಾಗದ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಸಿಗರ ಸೆಲ್ಫಿ ಕ್ರೇಜ್ ನಿಂದ ಆನೆಗಳು ನೀರು ಕುಡಿಯಲು ಸಾಧ್ಯವಾಗದೇ ಸಂಕಟ ಅನುಭವಿಸುವಂತಾದ ಘಟನೆ ನಡೆದಿದೆ. ಕಾರ್ಬೆಟ್ ಉದ್ಯಾನಕ್ಕೆ ಪ್ರಾಣಿಗಳ ವೀಕ್ಷಣೆಗೆ ಪ್ರವಾಸಿಗರು ಬಂದಿದ್ದು, ಅವರನ್ನು ಜೀಪ್ ಒಂದರಲ್ಲಿ ಉದ್ಯಾನದೊಳಗೆ ಕರೆದುಕೊಂಡು ಹೋಗಲಾಗಿದೆ. ಈ ಸಂದರ್ಭದಲ್ಲಿ ಆನೆಗಳು ಸಾಗುವ ಮಾರ್ಗ ಮಧ್ಯೆಯೇ ಕೆಲವರು ಜೀಪ್ ನಿಲ್ಲಿಸಿ ಸೆಲ್ಫಿ ತೆಗೆದುಕೊಂಡಿದ್ದಾರೆ.
ಆನೆಗಳ ಹಿಂಡು ಇದೇ ಮಾರ್ಗದಲ್ಲಿ ಸಾಗಿ ಕೆರೆಯಲ್ಲಿ ನೀರು ಕುಡಿಯಬೇಕಿತ್ತು. ಆದರೆ, ಸೆಲ್ಫಿ ತೆಗೆದುಕೊಳ್ಳಲು ಪ್ರವಾಸಿಗರು ದಾರಿ ಮಧ್ಯದಲ್ಲೇ ಜೀಪ್ ನಿಲ್ಲಿಸಿದ್ದರಿಂದ ಆನೆಗಳಿಗೆ ಮುಂದೆ ಸಾಗಲು ಆಗದೇ ಅಲ್ಲೇ ನಿಂತಿವೆ.
ಪ್ರವಾಸಿಗರ ಸೆಲ್ಫಿ ಕ್ರೇಜ್ ನಿಂದಾಗಿ ಆನೆಗಳು ನೀರು ಕುಡಿಯಲು ವಿಳಂಬವಾಗಿದೆ. ಇದು ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಅವರು ಮುಂದಿನ ಕ್ರಮ ಕೈಗೊಂಡಿದ್ದಾರೆ.