ಬೆಂಗಳೂರು: ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿ, ಪೊಲೀಸರು ಇಂದು ಕೈಗೊಂಡಿದ್ದ ಪ್ರತಿಭಟನೆಯಿಂದ ಹಿಂದೆ ಸರಿದಿರುವುದರಿಂದ, ಅವರನ್ನು ಅಭಿನಂದಿಸಲು ಗೃಹಸಚಿವ ಡಾ. ಜಿ. ಪರಮೇಶ್ವರ್ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ವಿರುದ್ಧವೇ ಗರಂ ಆಗಿದ್ದಾರೆ.
ಸಿಪಾಯಿ ದಂಗೆ ಕುರಿತಾಗಿ ಪತ್ರಕರ್ತರೊಬ್ಬರು ಪ್ರಸ್ತಾಪಿಸಿದಾಗ, ಗರಂ ಆದ ಪರಮೇಶ್ವರ್, ನೀವೇನಾದರೂ ಸಿಪಾಯಿ ದಂಗೆ ಬಯಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಆಗ ಸಿಪಾಯಿ, ದಂಗೆಯಿಂದ ಸ್ವಾತಂತ್ರ್ಯ ಹೋರಾಟದ ಕಹಳೆ ಮೊಳಗಿತ್ತು ಎಂದು ಪತ್ರಕರ್ತರು ಹೇಳಿದ್ದು, ಇದರಿಂದ ಸಿಟ್ಟಾದ ಪರಮೇಶ್ವರ್, ನೀವೇನಾದರೂ, ಶಶಿಧರ್ ಇರುವ ಕಡೆ ಹೋಗ್ತಿರಾ? ಅಲ್ಲಿ ಅವರು ಕಾಯುತ್ತಿದ್ದಾರೆ ಎಂದು ಪರೋಕ್ಷವಾಗಿ ಜೈಲಿಗೆ ಕಳಿಸುವ ಮಾತನ್ನಾಡಿದ್ದಾರೆ.
ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಅವರ ಬಳಿಗೆ ಕಳುಹಿಸುವುದಾಗಿ ಹೇಳುವ ಮೂಲಕ ಪತ್ರಕರ್ತರಿಗೆ ಪರಮೇಶ್ವರ್ ಧಮ್ಕಿ ಹಾಕಿದ್ದಾರೆ ಎಂದು ಹೇಳಲಾಗಿದೆ.