ಮಾರ್ಕೆಟ್ ನಲ್ಲಿ ವ್ಯಾಪಾರ ಮಾಡುವವರಿಗೆ ರೌಡಿಗಳು ಮಾಮೂಲಿ ಕೊಡುವಂತೆ ಬೆದರಿಕೆ ಹಾಕುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ರೌಡಿ ಮಂಗನ ಕಾಟದಿಂದ ರೋಸತ್ತು, ವ್ಯಾಪಾರಸ್ಥರು ಅದನ್ನು ಸೆರೆ ಹಿಡಿದು ಪಂಜರದಲ್ಲಿಟ್ಟ ಘಟನೆ ನಡೆದಿದೆ.
ಚೆನ್ನೈನ ಟ್ರಿಪ್ಲಿಕೇನ್ ನಲ್ಲಿರುವ ಜಾಮ್ ಬಜಾರ್ ನಲ್ಲಿ ತರಕಾರಿ ಮಾರಾಟ ಮಾಡುವವರಿಗೆ ಈ ರೌಡಿ ಮಂಗ ದುಃಸ್ವಪ್ನವಾಗಿ ಕಾಡುತ್ತಿತ್ತು. ವ್ಯಾಪಾರ ಮಾಡಲು ಬಂದವರನ್ನು ಬೆದರಿಸಿ ಓಡಿಸುವುದು, ಇಲ್ಲವೇ ಅವರ ಕೈಯ್ಯಲ್ಲಿದ್ದುದನ್ನು ಕಿತ್ತುಕೊಂಡು ಈ ಮಂಗ ಪರಾರಿಯಾಗುತ್ತಿತ್ತು. ಜೊತೆಗೆ ಕೆಲವರನ್ನು ಕಚ್ಚಿದ್ದರಿಂದ ಬೆದರಿದ ಗ್ರಾಹಕರು ಬರುವುದು ಕಡಿಮೆಯಾಗಿ ವ್ಯಾಪಾರಸ್ಥರಿಗೆ ವ್ಯಾಪಾರವಿಲ್ಲದಂತಾಗಿತ್ತು.
ಕಳೆದ ವರ್ಷ ಕೊಲೆಗೀಡಾಗಿದ್ದ ರೌಡಿ, ಮಾರ್ಕೆಟ್ ಮುರಳಿಯ ನೆಚ್ಚಿನ ಗೆಳೆಯನಾಗಿದ್ದ ಈ ಮಂಗ, ಆತನ ಗುಣಗಳನ್ನೆಲ್ಲಾ ಮೈಗೂಡಿಸಿಕೊಂಡತ್ತಿತ್ತು. ಇದರ ಉಪಟಳದಿಂದ ರೋಸತ್ತ ವ್ಯಾಪಾರಸ್ಥರು ಅದನ್ನು ಹಿಡಿದು ಪಂಜರದಲ್ಲಿ ಕೂಡಿ ಹಾಕಿದ್ದಾರೆ. ಈ ವಿಚಾರ ಪ್ರಾಣಿ ದಯಾ ಸಂಘದವರಿಗೆ ಮುಟ್ಟಿದ್ದು, ಅವರು ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದಾರೆ. ಈಗ ರೌಡಿ ಮಂಗನನ್ನು ವಶಕ್ಕೆ ಪಡೆದಿರುವ ಅರಣ್ಯ ಇಲಾಖೆಯವರು ಗಿಂಡಿ ನ್ಯಾಷನಲ್ ಪಾರ್ಕ್ ನಲ್ಲಿ ಇದನ್ನು ಬಿಡುವುದಾಗಿ ತಿಳಿಸಿದ್ದಾರೆ.