ವೈಮನಸ್ಯ ತಲೆದೋರಿದ್ದ ಹಿನ್ನಲೆಯಲ್ಲಿ ಕೆಲ ಕಾಲ ದೂರವಾಗಿದ್ದ ಟೀಮ್ ಇಂಡಿಯಾದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಹಾಗೂ ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡು ಮತ್ತೇ ಒಂದಾಗಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಬಿರುಸಿನ ಬ್ಯಾಟಿಂಗ್ ಕಾರಣಕ್ಕಾಗಿ ಖ್ಯಾತಿಯ ಉತ್ತುಂಗಕ್ಕೇರಿರುವ ವಿರಾಟ್ ಕೊಹ್ಲಿ, ಪಂದ್ಯದ ನಡುವೆ ಬಿಡುವು ಮಾಡಿಕೊಂಡು ಅನುಷ್ಕಾ ಜೊತೆ ಡಿನ್ನರ್ ಗೆ ತೆರಳಿದ್ದರು. ಅನುಷ್ಕಾ ಸಹ ಸಲ್ಮಾನ್ ಖಾನ್ ಜೊತೆಗಿನ ‘ಸುಲ್ತಾನ್’ ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಮುಂಬೈನಲ್ಲಿದ್ದು, ಇಬ್ಬರೂ ಜೋಡಿ ಹಕ್ಕಿಗಳಂತೆ ವಿಹರಿಸಿದ್ದರು.
ಗುರುವಾರದಂದು ಅನುಷ್ಕಾ ಶರ್ಮಾ ‘ಸುಲ್ತಾನ್’ ಚಿತ್ರದ ಹಾಡೊಂದರ ಚಿತ್ರೀಕರಣಕ್ಕೆ ಬುಡಾಪೆಸ್ಟ್ ಗೆ ಹೋಗಬೇಕಿತ್ತು. ಆಗ ವಿರಾಟ್ ಹಾಗೂ ಅನುಷ್ಕಾ ಶರ್ಮಾ ಒಂದೇ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಹಾಜರಿದ್ದ ಮಾಧ್ಯಮ ಪ್ರತಿನಿಧಿಗಳು ಇಬ್ಬರ ಫೋಟೋ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಮಾಧ್ಯಮಗಳ ಕ್ಯಾಮರಾವನ್ನೂ ಲೆಕ್ಕಿಸದ ವಿರಾಟ್, ಅನುಷ್ಕಾರನ್ನು ಚುಂಬಿಸಿ ಬೀಳ್ಕೊಟ್ಟಿದ್ದಾರೆ.