ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ನಿವಾಸಿಯೊಬ್ಬರು ಚಿನ್ನಾಭರಣಗಳಿದ್ದ ತಮ್ಮ ಬ್ಯಾಗ್ ಕಳೆದುಕೊಂಡಿದ್ದು, ಅದನ್ನು ಪತ್ತೆ ಮಾಡಿದ ರೈಲ್ವೇ ಸಿಬ್ಬಂದಿ, ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.
ಶುಕ್ರವಾರದಂದು ರೈಲಿನಲ್ಲಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ರೇಖಾ ಎಂಬವರು ಕಡೂರು ನಿಲ್ದಾಣಕ್ಕೆ ರೈಲು ಬಂದ ವೇಳೆ ತಮ್ಮ ಬ್ಯಾಗ್ ಕಾಣೆಯಾಗಿರುವುದನ್ನು ಗಮನಿಸಿ ಆತಂಕಗೊಂಡಿದ್ದಾರೆ. ಕೂಡಲೇ ಅವರು ರೈಲಿನಿಂದ ಕೆಳಗಿಳಿದಿದ್ದು, ಅವರಿದ್ದ ರೈಲು ಹೋಗಿದೆ. ಆಗ ರೇಖಾ, ಸ್ಥಳೀಯ ನಿಲ್ದಾಣಾಧಿಕಾರಿಗಳಿಗೆ ತಮ್ಮ ಬ್ಯಾಗ್ ಕಾಣೆಯಾಗಿರುವ ಕುರಿತು ದೂರು ನೀಡಿ, ಮತ್ತೊಂದು ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.
ರೇಖಾರವರ ದೂರಿನನ್ವಯ ರೈಲು ನಿಲ್ಧಾಣದಲ್ಲಿ ರೈಲ್ವೇ ಪೊಲೀಸರು ಬ್ಯಾಗಿನ ಪತ್ತೆ ಕಾರ್ಯದಲ್ಲಿ ತೊಡಗಿದ್ದು, ಆಗ ಸುಲಭ ಶೌಚಾಲಯದ ಮೇಲ್ವಿಚಾರಕನಿಗೆ ಹಳಿಯ ಮೇಲೆ ಬಿದ್ದಿದ್ದ ಬ್ಯಾಗ್ ಸಿಕ್ಕಿದೆ. ಅವರು ಅದನ್ನು ನಿಲ್ದಾಣಾಧಿಕಾರಿಗಳಿಗೆ ತಲುಪಿಸಿದ್ದು, ಕೂಡಲೇ ಬ್ಯಾಗ್ ಕಳೆದುಕೊಂಡಿದ್ದ ರೇಖಾರವರ ಮೊಬೈಲ್ ಗೆ ಕರೆ ಮಾಡಿ ವಿಷಯ ತಿಳಿಸಲಾಗಿದೆ. ವಾಪಸ್ ಬಂದ ರೇಖಾ, ತಮ್ಮ ಬ್ಯಾಗ್ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಇದರಲ್ಲಿ ಸುಮಾರು 3 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಸೇರಿದಂತೆ ಸ್ವಲ್ಪ ನಗದು ಇತ್ತೆಂದು ಹೇಳಲಾಗಿದೆ.