ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ವ್ಯವಹಾರವೊಂದಕ್ಕೆ ಸಂಬಂಧಿಸಿದಂತೆ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದಾರೆಂಬ ಆರೋಪಕ್ಕೆ ಗುರಿಯಾಗಿರುವ ಮಹಾರಾಷ್ಟ್ರದ ಕಂದಾಯ ಸಚಿವ ಏಕನಾಥ್ ಖಾಡ್ಸೆ ರಾಜೀನಾಮೆ ನೀಡುವ ಕಾಲ ಸನ್ನಿಹಿತವಾಗುತ್ತಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಪಕ್ಷದ ರಾಜ್ಯ ಘಟಕದಿಂದ ವರದಿ ಕೇಳಿದ್ದು, ಗುರುವಾರದಂದು ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅಮಿತ್ ಷಾ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ಮಧ್ಯೆ ಮಿತ್ರ ಪಕ್ಷ ಶಿವಸೇನೆ ಕೂಡಾ ಈ ವಿಚಾರದಲ್ಲಿ ಕಾಂಗ್ರೆಸ್ ನೊಂದಿಗೆ ಧ್ವನಿಗೂಡಿಸಿದ್ದು, ತನಿಖೆಯಲ್ಲಿ ಆರೋಪ ಮುಕ್ತರಾಗುವವರೆಗೆ ಖಾಡ್ಸೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದಿದೆ. ಪಕ್ಷದ ರಾಷ್ಟ್ರೀಯ ಮುಖಂಡರು, ಮಹರಾಷ್ಟ್ರದ ದೇವೇಂದ್ರ ಫಡ್ನವೀಸ್ ಸರ್ಕಾರದ ಇಮೇಜ್ ಗೆ ಈ ಪ್ರಕರಣ ಧಕ್ಕೆ ತರಬಹುದೆಂಬ ಕಾರಣಕ್ಕೆ ಏಕನಾಥ್ ಖಾಡ್ಸೆ ರಾಜೀನಾಮೆ ನೀಡಲು ಸೂಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ.