ಈ ಫೋಟೋ ಈಗ ಎಲ್ಲರ ಮನ ಕಲಕುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ತಮ್ಮ ಗ್ರಾಮದ ಮಹಿಳೆಯೊಬ್ಬರ ಶವವನ್ನು ಮರಣೋತ್ತರ ಪರೀಕ್ಷೆ ಬಳಿಕ ಯುವಕರಿಬ್ಬರು ಮೋಟಾರ್ ಬೈಕ್ ಗೆ ಶವವನ್ನು ಕಟ್ಟಿ ತೆಗೆದುಕೊಂಡು ಹೋಗುತ್ತಿರುವ ಚಿತ್ರ ಇದಾಗಿದೆ.
ಒಡಿಶಾದ ನಬರಂಗ್ ಪುರ್ ಜಿಲ್ಲೆಯ ಜರಿಗಾಂವ್ ಬ್ಲಾಕ್ ನಲ್ಲಿ ಈ ಘಟನೆ ನಡೆದಿದ್ದು, ಬರುಮುಂಡಾ ಗ್ರಾಮದ ಮಹಿಳೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದರು. ಹೀಗಾಗಿ ಮರಣೋತ್ತರ ಪರೀಕ್ಷೆ ನಡೆಸಬೇಕಾಗಿದ್ದ ಕಾರಣ ಜರಿಗಾಂವ್ ನ ಕಮ್ಯುನಿಟಿ ಹೆಲ್ತ್ ಸೆಂಟರ್ ಗೆ ಮೃತಳ ದೇಹವನ್ನು ತರಲಾಗಿತ್ತು.
ಮರಣೋತ್ತರ ಪರೀಕ್ಷೆ ಬಳಿಕ ಖಾಸಗಿ ವಾಹನದಲ್ಲಿ ದೇಹವನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗಲು ಹಣವಿಲ್ಲದ ಕಾರಣ ಈ ಯುವಕರು ದೇಹಕ್ಕೆ ಪ್ಲಾಸ್ಟಿಕ್ ಚೀಲ ಸುತ್ತಿ ಬೈಕಿನ ಹಿಂಭಾಗಕ್ಕೆ ಕಟ್ಟಿ ತಮ್ಮ ಗ್ರಾಮಕ್ಕೆ ಸಾಗಿಸಿದ್ದಾರೆ. ಆದರೆ ನಬರಂಗ್ ಪುರ್ ಜಿಲ್ಲಾಧಿಕಾರಿ ರಕ್ಷಿತಾ ಪಂಡಿತ್, ಶವ ಸಾಗಿಸಲು ಎರಡು ವಾಹನಗಳು ಅಲ್ಲಿ ಲಭ್ಯವಿದ್ದವು. ಆದರೂ ಯುವಕರು ತಮ್ಮ ಬೈಕ್ ನಲ್ಲಿ ಶವ ತೆಗೆದುಕೊಂಡು ಹೋಗಿರುವುದಕ್ಕೆ ಕಾರಣ ತಿಳಿದು ಬಂದಿಲ್ಲವೆಂದಿದ್ದಾರೆ.