ಪಕ್ಷದ ವಿರುದ್ದ ತಿರುಗಿ ಬಿದ್ದಿರುವ ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ, ಅವರ ವಿರುದ್ದ ಕ್ರಮ ಜರುಗಿಸುವ ಸೂಚನೆ ನೀಡಿದ್ದಾರೆ.
ಶಾಸಕಾಂಗ ಪಕ್ಷದ ಸಭೆಯ ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯಸಭಾ ಚುನಾವಣೆಯಲ್ಲಿ ತಾವೂ ಸೇರಿದಂತೆ ಐವರು ಜೆಡಿಎಸ್ ಶಾಸಕರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಆದರೆ ಜಮೀರ್ ಅಹ್ಮದ್ ಹೊರತುಪಡಿಸಿ ಇತರೆ ನಾಲ್ವರು ಶಾಸಕರು ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆಂದು ತಿಳಿಸಿದರು.
ಹೆಬ್ಬಾಳ ವಿಧಾನಸಭಾ ಉಪ ಚುನಾವಣೆಯಲ್ಲಿ ಪಕ್ಷಕ್ಕಿಂತ ಧರ್ಮ, ಜಾತಿ ದೊಡ್ಡದು ಎಂಬ ಹೇಳಿಕೆ ನೀಡಿದ್ದ ಜಮೀರ್ ಅಹ್ಮದ್ ಖಾನ್, ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಂ. ಫಾರೂಕ್ ರನ್ನೇಕೆ ಬೆಂಬಲಿಸುತ್ತಿಲ್ಲವೆಂದು ಪ್ರಶ್ನಿಸಿದ ಕುಮಾರಸ್ವಾಮಿ, ಇದರಿಂದ ಅವರ ನಿಜ ಬಣ್ಣ ಬಯಲಾಗಿದೆ ಎಂದು ಕುಟುಕಿದರು. ಜಮೀರ್ ಅಹ್ಮದ್ ಅವರಿಂದ ಜೆಡಿಎಸ್ ಗೆ ಡ್ಯಾಮೇಜ್ ಆಗಿದೆ ಎಂಬುದನ್ನು ಒಪ್ಪಿಕೊಂಡ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಚರ್ಚಿಸಿ ಕ್ರಮ ಜರುಗಿಸುವ ಸುಳಿವು ನೀಡಿದರು.