ಮಂಡ್ಯ: ಅನೈತಿಕ ಸಂಬಂಧದಿಂದ ಏನೆಲ್ಲಾ ಅವಾಂತರಗಳಾಗುತ್ತವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಹೀಗೆ ಅತ್ತಿಗೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ದುರುಳನೊಬ್ಬ ಆಕೆಯನ್ನೇ ಕೊಲೆ ಮಾಡಿದ್ದಾನೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕಣಿವೆಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಣ್ಣ, ತಮ್ಮ ಅಕ್ಕಪಕ್ಕದ ಮನೆಯಲ್ಲೇ ವಾಸವಾಗಿದ್ದು, ತಮ್ಮನ ಮದುವೆಯಾಗಿ ಕೆಲ ವರ್ಷಗಳ ಹಿಂದೆಯೇ ಪತ್ನಿಯಿಂದ ದೂರವಾಗಿದ್ದಾನೆ. ಈತ ಅಣ್ಣನ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಅಣ್ಣ ಬೇರೆ ಊರಿನಲ್ಲಿ ಕೆಲಸ ಮಾಡುತ್ತಿದ್ದು, ತಮ್ಮನ ಮನೆಗೆ ಅತ್ತಿಗೆ ಆಗಾಗ ಬಂದು ಹೋಗುತ್ತಿದ್ದಳೆನ್ನಲಾಗಿದೆ. ಇಬ್ಬರ ನಡುವೆ ಜಗಳವಾಗಿ ಅತ್ತಿಗೆಯನ್ನೇ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಮನೆಯಿಂದ ಹೊರ ಹೋದ ಮಹಿಳೆ ಬಹಳ ಹೊತ್ತಿನವರೆಗೂ ವಾಪಸ್ ಬಾರದ ಕಾರಣ, ಹುಡುಕಾಟ ನಡೆಸಿದಾಗ, ತಮ್ಮನ ಮನೆಯಲ್ಲಿ ಪತ್ನಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಪಾಂಡವಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮುಂದಿನ ಕ್ರಮ ಜರುಗಿಸಿದ್ದಾರೆ ಎಂದು ಹೇಳಲಾಗಿದೆ.