ರಾಜ್ಯ ಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಹೆಚ್.ಡಿ. ಕುಮಾರಸ್ವಾಮಿಯವರ ನೇತೃತ್ವದಲ್ಲಿ ನಡೆದಿದ್ದು, ಈ ಸಭೆಗೆ ಭಿನ್ನಮತೀಯ ಶಾಸಕರೆಂದು ಗುರುತಿಸಿಕೊಂಡಿರುವ ಜಮೀರ್ ಅಹ್ಮದ್ ಖಾನ್, ಇಕ್ಬಾಲ್ ಅನ್ಸಾರಿ, ಬಾಲಕೃಷ್ಣ, ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಚೆಲುವರಾಯ ಸ್ವಾಮಿ ಗೈರು ಹಾಜರಾಗಿದ್ದಾರೆನ್ನಲಾಗಿದೆ.
ಸಭೆಗೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ, ರಾಜ್ಯಸಭೆಗೆ ಜೆಡಿಎಸ್ ನಿಂದ ಬಿ.ಎ. ಫಾರೂಕ್ ಕಣಕ್ಕಿಳಿಯಲಿದ್ದಾರೆಂದು ತಿಳಿಸಿದರಲ್ಲದೇ ಯಾರು, ಯಾರಿಗೆ ಮತದಾನ ಮಾಡಲಿದ್ದಾರೆಂಬುದು ಚುನಾವಣೆ ದಿನ ತಿಳಿಯಲಿದೆ ಎಂದರು.
ವಿಧಾನಪರಿಷತ್ ಗೆ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜೆಡಿಎಸ್ ನಿರ್ಧರಿಸಿದ್ದು, ಬಿಜೆಪಿಯ ಹೆಚ್ಚುವರಿ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ನೀಡುವಂತೆ ಕೋರಲಾಗುವುದು ಎಂದು ಹೇಳಲಾಗಿದೆ. ಮುಂಬರುವ ಬೆಂಗಳೂರು ಮೇಯರ್ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿಯನ್ನು ಬೆಂಬಲಿಸಲಿದೆ ಎನ್ನಲಾಗಿದ್ದು, ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಗೆ ಬೆಂಬಲ ನೀಡುವ ಕುರಿತು ಕುಮಾರಸ್ವಾಮಿ, ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆಂದು ತಿಳಿದುಬಂದಿದೆ.