ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಹಾಡಹಗಲೇ ನಡು ರಸ್ತೆಯಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಈ ಹತ್ಯೆ ಮಾಡಲಾಗಿದ್ದು, ಜನನಿಬಿಡ ಪ್ರದೇಶದಲ್ಲೇ ಈ ಘಟನೆ ನಡೆದಿರುವುದು ತಲ್ಲಣವನ್ನುಂಟು ಮಾಡಿದೆ.
ಅರಸೀಕೆರೆಯ ಅಂಬೇಡ್ಕರ್ ವೃತ್ತದಲ್ಲಿ ಈ ಹತ್ಯೆ ನಡೆದಿದ್ದು, ಎರಡು ಗುಂಪುಗಳ ನಡುವೆ ಜಗಳ ನಡೆಯುತ್ತಿದ್ದ ವೇಳೆ ಸಮೀಪದಲ್ಲಿಯೇ ಇದ್ದ ಆಸ್ಪತ್ರೆಯ ಅಂಬುಲೆನ್ಸ್ ಚಾಲಕ ವರುಣ್ ಎಂಬವರು, ರೋಗಿಗಳಿಗೆ ತೊಂದರೆಯಾಗುತ್ತದೆ. ಇಲ್ಲಿ ಜಗಳವಾಡಬೇಡಿ ಎಂದು ಹೇಳಿದ್ದೇ ಕೊಲೆಗೆ ಕಾರಣವಾಯಿತೆನ್ನಲಾಗಿದೆ.
ಕೋಳಿ ಅಂಗಡಿ ಮಾಲೀಕ ಚಾರು ಎಂಬಾತ ಜಗಳವಾಡುತ್ತಿದ್ದು, ಇಲ್ಲಿ ಗಲಾಟೆ ಮಾಡಬಾರದೆಂದು ವರುಣ್ ಹೇಳುತ್ತಲೇ ತನ್ನ ಬಳಿಯಿದ್ದ ಚಾಕುವಿನಿಂದ ಚಾರು, ವರುಣ್ ಎದೆಗೆ ಇರಿದಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನೂರಾರು ಜನರ ಸಮ್ಮುಖದಲ್ಲೇ ಈ ಕೃತ್ಯ ನಡೆದಿದ್ದು, ಹತ್ಯೆ ಮಾಡಿ ಪರಾರಿಯಾಗುತ್ತಿದ್ದ ಚಾರು ಮತ್ತಾತನ ಸಹಚರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.