ಮಹಿಳೆಯೊಬ್ಬಳು ಮೊಬೈಲ್ ನಲ್ಲಿ ಮಾತನಾಡುತ್ತಾ ಮೈಮರೆತಿರುವಾಗಲೇ ದುರಂತವೊಂದು ನಡೆದಿದೆ. ಕುಟುಂಬ ಸದಸ್ಯರ ಜೊತೆ ತನ್ನ ಮೂರು ವರ್ಷದ ಮಗಳನ್ನು ಕರೆದುಕೊಂಡು ಬೀಚ್ ಗೆ ಹೋಗಿದ್ದ ಮಹಿಳೆಯ ಕಣ್ಣೆದುರಿನಲ್ಲೇ ಆಕೆಯ ಮಗು ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದೆ.
ವಿಶಾಖಪಟ್ಟಣಂನಲ್ಲಿ ಈ ಘಟನೆ ನಡೆದಿದ್ದು, ಶನಿವಾರ ಸಂಜೆ ತನ್ನ ಪತಿ ರಾಜು, 3 ವರ್ಷದ ಮಗಳು ಜೋತ್ಸ್ನಾ ಹಾಗೂ ಆರು ಮಂದಿ ಸಂಬಂಧಿಗಳ ಜೊತೆ ಮಹಿಳೆ ಅಲ್ಲಿನ ರಾಮಕೃಷ್ಣ ಬೀಚ್ ಗೆ ಹೋಗಿದ್ದಾರೆ. ಮಹಿಳೆಯ ಪತಿ ರಾಜು, ಮಗಳಿಗಾಗಿ ಪಾಪ್ ಕಾರ್ನ್ ತರಲು ತೆರಳಿದ್ದು, ಈ ವೇಳೆ ಮಹಿಳೆಯ ಮೊಬೈಲ್ ಗೆ ಕರೆಯೊಂದು ಬಂದಿದೆ.
ಆದನ್ನು ರಿಸೀವ್ ಮಾಡಿದ ಆಕೆ ಮಾತನಾಡುತ್ತಾ ಹಾಗೆಯೇ ನೀರಿನತ್ತ ಸಾಗಿದ್ದು, ಮಗಳೂ ಸಹ ತನ್ನನ್ನು ಹಿಂಬಾಲಿಸಿಕೊಂಡು ಬರುತ್ತಿರುವುದು ಅರಿವಿಗೆ ಬಂದಿಲ್ಲ. ಆಗ ಬಂದ ದೊಡ್ಡ ಅಲೆಯೊಂದು ಜೋತ್ಸ್ನಾಳನ್ನು ಎಳೆದೊಯ್ದಿದೆ. ದಡದಲ್ಲಿದ್ದವರು ಕೂಡಲೇ ಧಾವಿಸಿ ಮಗುವನ್ನು ರಕ್ಷಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ಕಡಲ ರಕ್ಷಣಾ ಪಡೆಯವರು ಶನಿವಾರ ಹುಡುಕಾಟ ನಡೆಸಿದ್ದು, ಕತ್ತಲಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು. ಭಾನುವಾರದಂದು VUDA ಪಾರ್ಕ್ ಸಮೀಪ ಕಡಲಿನಲ್ಲಿ ಮಗುವಿನ ಮೃತದೇಹ ತೇಲುತ್ತಿರುವುದು ಕಂಡು ಬಂದಿದೆ. ಶವವನ್ನು ಹೊರ ತೆಗೆದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ನೀಡಲಾಗಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ.