ದೀಪಾವಳಿ ಹಬ್ಬ ಸಮೀಪಿಸುತ್ತಿರುವಂತೆಯೇ ದೇಶದ ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆ ಏರಿಕೆ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಕಳ್ಳ ಸಾಗಾಣಿಕೆದಾರರು ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದು, ಪುಣೆ ವಿಮಾನ ನಿಲ್ದಾಣದಲ್ಲಿ ಭಾರೀ ಮೊತ್ತದ ಅಕ್ರಮ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಇಂದು ಬೆಳಿಗ್ಗೆ ದುಬೈನಿಂದ ಬಂದಿಳಿದ ಸ್ಪೈಸ್ ಜೆಟ್ ವಿಮಾನದ ಟಾಯ್ಲೆಟ್ ನಲ್ಲಿ ಬರೋಬ್ಬರಿ 9.1 ಕೆ.ಜಿ. ತೂಕದ ಅಂದಾಜು 2.8 ಕೋಟಿ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ತಪಾಸಣೆ ವೇಳೆ ಸಿಕ್ಕಿ ಬೀಳುವ ಭೀತಿಯಿಂದ ಚಿನ್ನವನ್ನು ಟಾಯ್ಲೆಟ್ ನಲ್ಲಿ ಅಡಗಿಸಿಟ್ಟಿರಬಹುದೆಂಬ ಶಂಕೆಯೂ ವ್ಯಕ್ತವಾಗಿದ್ದು, ವಿಮಾನ ಸಿಬ್ಬಂದಿ ಇದರಲ್ಲಿ ಶಾಮೀಲಾಗಿರಬಹುದೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. 10 ಚಿನ್ನದ ಗಟ್ಟಿಗಳನ್ನು ಟಾಯ್ಲೆಟ್ ನಲ್ಲಿ ಅಡಗಿಸಿಟ್ಟು ಬಳಿಕ ಅವುಗಳನ್ನು ತೆಗೆದುಕೊಳ್ಳಲು ಯೋಜಿಸಲಾಗಿತ್ತೇ ಎಂಬ ಅನುಮಾನವೂ ವ್ಯಕ್ತವಾಗಿದೆ.