ಯಾವುದಾದ್ರೂ ವಸ್ತು ಬಿಟ್ಟಿಯಾಗಿ ಸಿಗುತ್ತೆ ಅಂದ್ರೆ ಅದನ್ನು ದುರುಪಯೋಗಪಡಿಸಿಕೊಳ್ಳುವವರೇ ಹೆಚ್ಚು. ಇಂತಹ ಅವಕಾಶಗಳಿಗಾಗಿಯೇ ವಂಚಕರು ಕಾಯ್ತಿರ್ತಾರೆ. ಈಗ ರಿಲಯೆನ್ಸ್ ಜಿಯೋ ಗ್ರಾಹಕರನ್ನೂ ಹ್ಯಾಕರ್ ಗಳು ಮೋಸದ ಜಾಲದಲ್ಲಿ ಸಿಲುಕಿಸ್ತಿದ್ದಾರೆ. eScan ಸಂಶೋಧನಾ ತಂಡ, ರಿಲಯೆನ್ಸ್ ಜಿಯೋ ಸಿಮ್ ಕಾರ್ಡ್ ಹಗರಣವೊಂದನ್ನು ಬಯಲಿಗೆ ತಂದಿದೆ.
ಆನ್ ಲೈನ್ ಮೂಲಕ ಜಿಯೋ ಸಿಮ್ ಖರೀದಿಗೆ ಮುಂದಾಗುವ ಗ್ರಾಹಕರಿಗೆ aonebiz.in ವಂಚಿಸುತ್ತಿದೆ. ಅವರು ನಿಮ್ಮ ವೈಯಕ್ತಿಕ ವಿವರ ಕೇಳ್ತಾರೆ, ಬಳಿಕ ಲಾಜಿಸ್ಟಿಕ್ಸ್ ಚಾರ್ಜಸ್ ಹೆಸರು ಹೇಳಿಕೊಂಡು 199 ರೂ. ಪಾವತಿಸುವಂತೆ ಸೂಚಿಸ್ತಾರೆ. ನೀವು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸಿದ್ರೆ ನಿಮ್ಮ ದುಡ್ಡು ಕೈತಪ್ಪಿದಂತೆಯೇ ಲೆಕ್ಕ.
ಜೊತೆಗೆ ನಿಮ್ಮ ವೈಯಕ್ತಿಕ ವಿವರವನ್ನು ಅವರು ಯಾವುದಾದ್ರೂ ಕ್ರಿಮಿನಲ್ ಕೆಲಸಗಳಿಗೆ ದುರುಪಯೋಗಪಡಿಸಿಕೊಳ್ಳೋ ಸಾಧ್ಯತೆ ಇದೆ. aonebiz.in ರಿಲಯೆನ್ಸ್ ಜಿಯೋದ ಅಧಿಕೃತ ಏಜೆಂಟ್ ಅಲ್ಲ. ನೀವು ಜಿಯೋ ಸಿಮ್ ಪಡೆಯಬೇಕಂದ್ರೆ ರಿಲಯನ್ಸ್ ಡಿಜಿಟಲ್ ಮಳಿಗೆ ಅಥವಾ ರಿಲಯನ್ಸ್ ಡಿಜಿಟಲ್ ಮಿನಿ ಎಕ್ಸ್ ಪ್ರೆಸ್ ಸ್ಟೋರ್ ಗಳಿಗೆ ಮಾತ್ರ ಭೇಟಿ ಕೊಡಿ. ಯಾವುದೇ ಕೊಡುಗೆಗಳ ಲಾಭ ಪಡೆಯಲು ಪ್ರಯತ್ನಿಸುವ ಮುನ್ನ ಅದರ ಸತ್ಯಾಸತ್ಯತೆ ಪರಿಶೀಲಿಸಿಕೊಳ್ಳುವಂತೆ eScan ತಂಡ ಸಾರ್ವಜನಿಕರಲ್ಲಿ ಮನವಿ ಮಾಡಿದೆ.