ದೇಶದೆಲ್ಲೆಡೆ ವಿಜಯ ದಶಮಿಯ ಸಂಭ್ರಮ ಮನೆ ಮಾಡಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಲಕ್ನೋದ ಪ್ರಸಿದ್ಧ ರಾಮಲೀಲಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆ ಭರದಿಂದ ಸಾಗಿದೆ. ಈಗಾಗಲೇ ಗೃಹ ಸಚಿವ ರಾಜನಾಥ್ ಸಿಂಗ್ ಲಕ್ನೋಕ್ಕೆ ಭೇಟಿ ನೀಡಿದ್ದು, ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಸಂಜೆ ಆರು ಗಂಟೆ ಸುಮಾರಿಗೆ ಪ್ರಧಾನಿ ಮೋದಿ ಲಕ್ನೋ ತಲುಪಲಿದ್ದಾರೆ. ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್, ರಾಜನಾಥ್ ಸಿಂಗ್ ಹಾಗೂ ಮೇಯರ್ ದಿನೇಶ್ ಶರ್ಮಾ ವಿಮಾನ ನಿಲ್ದಾಣದಲ್ಲಿ ಮೋದಿಯವರನ್ನು ಬರಮಾಡಿಕೊಳ್ಳಲಿದ್ದಾರೆ. ಆದ್ರೆ ರಾಮ್ ಲೀಲಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅಖಿಲೇಶ್ ಗೈರಾಗುವ ಸಾಧ್ಯತೆ ಇದೆ.
ರಾಮ್ ಲೀಲಾ ಮೈದಾನವನ್ನು 20 ಕ್ವಿಂಟಾಲ್ ಹೂವಿನಿಂದ ಅಲಂಕಾರ ಮಾಡಲಾಗಿದೆ. 121 ಅಡಿ ರಾವಣನನ್ನು ಸಿದ್ಧಪಡಿಸಲಾಗಿದ್ದು, ಪ್ರಧಾನಿ ಮೋದಿ ರಾವಣ ದಹನ ಮಾಡಲಿದ್ದಾರೆ. ನಗರದ ವಿವಿಧೆಡೆ 45 ಎಲ್ ಇ ಡಿ ಸ್ಕ್ರೀನ್ ಅಳವಡಿಸಲಾಗಿದ್ದು, ಜನರು ರಾವಣ ದಹನವನ್ನು ಲೈವ್ ಆಗಿ ನೋಡಬಹುದಾಗಿದೆ. ಮೋದಿ ಆಗಮನದ ಹಿನ್ನೆಲೆಯಲ್ಲಿ ಲಕ್ನೋದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಪಾಸ್ ಇರುವವರಿಗೆ ಮಾತ್ರ ರಾಮಲೀಲಾ ಮೈದಾನಕ್ಕೆ ಪ್ರವೇಶ ನೀಡಲು ನಿರ್ಧರಿಸಲಾಗಿದೆ.