ಕಳೆದ ವಾರ ಇಂಡೋನೇಷ್ಯಾದ ಜಕಾರ್ತದಲ್ಲಿ ಹಾಡಹಗಲೇ ಟ್ರಾಫಿಕ್ ಸಿಗ್ನಲ್ ನಲ್ಲಿ ಅಳವಡಿಸಲಾಗಿದ್ದ ಬೃಹತ್ ಬಿಲ್ ಬೋರ್ಡ್ ನಲ್ಲಿ ನೀಲಿ ಚಿತ್ರ ಪ್ರದರ್ಶನಗೊಂಡಿತ್ತು. ಚಲನಚಿತ್ರಗಳಲ್ಲಿ ರೋಮ್ಯಾಂಟಿಕ್ ದೃಶ್ಯಗಳನ್ನು ತೋರಿಸಲೂ ನಿಷೇಧವಿರುವ ಇಂಡೋನೇಷ್ಯಾದಲ್ಲಿ ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ ನೀಲಿ ಚಿತ್ರ ಪ್ರದರ್ಶನಗೊಂಡಿದ್ದು, ದಿಗ್ಬ್ರಮೆಗೊಳಿಸಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಬಿಲ್ ಬೋರ್ಡ್ ನಿರ್ವಹಿಸುತ್ತಿದ್ದ ವಿಡಿಯೋಟ್ರಾನ್ ಕಛೇರಿ ಮೇಲೆ ದಾಳಿ ಮಾಡಿ ಕಂಪ್ಯೂಟರ್, ಹಾರ್ಡ್ ಡಿಸ್ಕ್ ಗಳನ್ನು ವಶಪಡಿಸಿಕೊಂಡಿದ್ದರು. ಈ ಘಟನೆ ಆಕಸ್ಮಿಕವಾಗಿ ನಡೆದಿರಬಹುದೆಂಬ ಊಹೆ ಈಗ ತಲೆಕೆಳಗಾಗಿದೆ.
ವಿಡಿಯೋಟ್ರಾನ್ ವೆಬ್ ಸೈಟ್ ಹ್ಯಾಕ್ ಮಾಡಿ ನೀಲಿ ಚಿತ್ರ ಹಾಕಿದ್ದ ಟೆಕ್ಕಿಯೊಬ್ಬನನ್ನು ಜಕಾರ್ತಾದಲ್ಲಿ ಬಂಧಿಸಲಾಗಿದೆ. ವಿಚಾರಣೆ ವೇಳೆ ಆತ ಹೇಳಿದ್ದನ್ನು ಕೇಳಿ ಪೊಲೀಸರಿಗೂ ಶಾಕ್ ಆಗಿದೆ. ಕೆಲಸದಲ್ಲಿ ತನಗೆ ಬೋರ್ ಆಗಿದ್ದ ಕಾರಣ ಕೊಂಚ ಮನರಂಜನೆ ತೆಗೆದುಕೊಳ್ಳಲು ಟ್ರಾಫಿಕ್ ಸಿಗ್ನಲ್ ನಲ್ಲಿದ್ದ ಬಿಲ್ ಬೋರ್ಡ್ ನಲ್ಲಿ ನೀಲಿ ಚಿತ್ರ ಪ್ರದರ್ಶಿಸಿದ್ದಾಗಿ ಆತ ಹೇಳಿಕೆ ನೀಡಿದ್ದಾನೆ. ಇದನ್ನು ನೋಡಿ ಜನತೆ ಶಾಕ್ ಗೊಳಗಾಗಿದ್ದು, ತನಗೆ ಖುಷಿ ಸಿಕ್ಕಿತ್ತು ಎಂದು ಒಪ್ಪಿಕೊಂಡಿದ್ದಾನೆ. ಇದೀಗ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪ ದೃಢಪಟ್ಟಲ್ಲಿ 12 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಲಿದ್ದಾನೆ.