ಬೆಂಗಳೂರು: ಚಲಿಸುತ್ತಿದ್ದ ಲಾರಿಗೆ ಬೆಂಕಿ ತಗುಲಿದ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಸಿಗ್ನಲ್ ಸಮೀಪ ನಡೆದಿದೆ.
ಪುಣೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕಂಟೇನರ್ ನಲ್ಲಿ ಪೀಠೋಪಕರಣ, ಮನೆಯ ಸಾಮಗ್ರಿಗಳು ಇದ್ದು, ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ತಗುಲಿದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಚಾಲಕ ಲಾರಿ ನಿಲ್ಲಿಸಿ ಬೆಂಕಿ ನಂದಿಸಲು ಯತ್ನಿಸಿದರೂ, ಕ್ಷಣಾರ್ಧದಲ್ಲಿ ಬೆಂಕಿಯ ಜ್ವಾಲೆ ವ್ಯಾಪಿಸಿದೆ. ನಡು ರಸ್ತೆಯಲ್ಲೇ ಬೆಂಕಿ ತಗುಲಿದ ಲಾರಿ ನಿಂತಿದ್ದನ್ನು ಕಂಡ ಸಾರ್ವಜನಿಕರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ 2 ಅಗ್ನಿಶಾಮಕ ವಾಹನಗಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ನಿವೃತ್ತ ಅಧಿಕಾರಿಯೊಬ್ಬರು ಬೆಂಗಳೂರಿಗೆ ಮನೆ ಸಾಮಾನು ಶಿಫ್ಟ್ ಮಾಡುತ್ತಿದ್ದರು. ಕಂಟೇನರ್ ನಲ್ಲಿದ್ದ ಸಾಮಾನುಗಳೆಲ್ಲಾ ಸುಟ್ಟುಹೋಗಿದ್ದು, ಅಪಾರ ಹಾನಿ ಸಂಭವಿಸಿದೆ.