ಬೆಂಗಳೂರಿನ ತಿರುಮಲಶೆಟ್ಟಿಹಳ್ಳಿ ಠಾಣೆ ಪೊಲೀಸರು, ಕಾರ್ಯಾಚರಣೆ ನಡೆಸಿ, ಬರೋಬ್ಬರಿ 50 ಲಕ್ಷ ರೂಪಾಯಿ ಮೌಲ್ಯದ 4 ಟನ್ ರಕ್ತ ಚಂದನ ವಶಪಡಿಸಿಕೊಂಡಿದ್ದಾರೆ. ಕಟ್ಟಿಗೇನಹಳ್ಳಿಯ ಬಾವಿಯೊಂದರಲ್ಲಿ ಇದನ್ನು ಅಡಗಿಸಿಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಾದ ಆಯಾಜ್, ಮೌಲಾ, ಮಹಮ್ಮದ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಆಂಧ್ರಪ್ರದೇಶ ಪೊಲೀಸರು ನೀಡಿದ ಮಾಹಿತಿ ಆಧರಿಸಿ ತಿರುಮಲ ಶೆಟ್ಟಿ ಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಆಂಧ್ರ ಪೊಲೀಸರು ಮುಖ್ಯ ಆರೋಪಿ ರಿಯಾಜ್ ಎಂಬುವನನ್ನು ಬಂಧಿಸಿದ್ದು, ವಿಚಾರಣೆ ಸಂದರ್ಭದಲ್ಲಿ ಆತ 20 ದಿನಗಳ ಹಿಂದೆ ಶೇಷಾಚಲಂನಿಂದ ರಕ್ತ ಚಂದನ ತಂದು, ಉಬೇದುಲ್ಲಾ ಎಂಬುವವರ ಬಾವಿಯಲ್ಲಿ ಅಡಗಿಸಿಟ್ಟಿದ್ದ ವಿಚಾರ ಗೊತ್ತಾಗಿದೆ.
ಆ ನಂತರದಲ್ಲಿ ಆಂಧ್ರ ಪೊಲೀಸರು, ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ. ಬಾವಿಯಲ್ಲಿದ್ದ ಬರೋಬ್ಬರಿ 50 ಲಕ್ಷ ರೂಪಾಯಿ ಮೌಲ್ಯದ 4 ಟನ್ ರಕ್ತ ಚಂದನದ ತುಂಡುಗಳನ್ನು ಜಫ್ತಿ ಮಾಡಲಾಗಿದೆ.