ಅಸ್ಸಾಂ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮುಖ್ಯಮಂತ್ರಿಯಾಗಿ ಸರ್ಬಾನಂದ ಸೋನೋವಾಲ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಗುವಾಹಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಪಿ.ಬಿ. ಆಚಾರ್ಯ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.
ಬಿಜೆಪಿ ಹಾಗೂ ಮಿತ್ರಪಕ್ಷಗಳಾದ ಅಸ್ಸಾಂ ಗಣ ಪರಿಷತ್, ಬಿಡಿಎಫ್ ಪಕ್ಷದ ಶಾಸಕರು, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಸ್ಸಾಂ ವಿಧಾನಸಭೆಯಲ್ಲಿ 126 ಸ್ಥಾನಗಳಿದ್ದು, 86 ಸ್ಥಾನಗಳೊಂದಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಸರ್ಬಾನಂದ ಸೋನೋವಾಲ್ ಮುಖ್ಯಮಂತ್ರಿಯಾಗಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾತನಾಡಿದ ಸೋನೋವಾಲ್, ರಾಜ್ಯದ ಜನರ ಸೇವೆಗೆ ಸಿಕ್ಕ ಅವಕಾಶ ಇದಾಗಿದೆ ಎಂದು ಹೇಳಿದ್ದಾರೆ.
ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ರಾಮ್ ವಿಲಾಸ್ ಪಾಸ್ವಾನ್, ನಿತಿನ್ ಗಡ್ಕರಿ ಮೊದಲಾದವರು ಭಾಗವಹಿಸಿದ್ದರು.