ಚಲಿಸುವ ರೈಲಿನಿಂದ ಆತುರದಲ್ಲಿ ಇಳಿಯುವ ಹಾಗೂ ಹತ್ತುವ ಸಂದರ್ಭಗಳಲ್ಲಿ ಈಗಾಗಲೇ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತು ರೈಲ್ವೇ ಇಲಾಖೆ ಎಚ್ಚರಿಕೆ ನೀಡುತ್ತಿದ್ದರೂ ಕೆಲ ಪ್ರಯಾಣಿಕರು ನಿರ್ಲಕ್ಷ್ಯ ವಹಿಸಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ.
ಅಂತಹುದೇ ಒಂದು ಘಟನೆ ಮುಂಬೈನಲ್ಲಿ ನಡೆದಿದ್ದು, ಅದೃಷ್ಟವಶಾತ್ ಅಲ್ಲಿಯೇ ಇದ್ದ ಪೊಲೀಸ್ ಪೇದೆ ತೋರಿದ ಸಮಯಪ್ರಜ್ಞೆಯಿಂದ ಯುವತಿಯೊಬ್ಬಳು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಪೇದೆಯ ಸಮಯಪ್ರಜ್ಞೆಗೆ ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೇರಿದಂತೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಲೋನಾವಾಲಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಯುವತಿಯೊಬ್ಬಳು ಚಲಿಸುವ ರೈಲಿನಿಂದ ಇಳಿಯುವ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾಳೆ. ಈ ಸಂದರ್ಭದಲ್ಲಿ ರೈಲು ನಿಲ್ದಾಣದ ಬೆಂಚಿನ ಮೇಲೆ ಕುಳಿತಿದ್ದ ಲೋನಾವಾಲಾ ಪೊಲೀಸ್ ಠಾಣೆಯ ಪೇದೆ ಪವನ್ ತಾಯ್ಡೆ, ಯುವತಿ ರೈಲಿನ ಕೆಳಗೆ ಹೋಗುತ್ತಿರುವುದನ್ನು ಗಮನಿಸಿ ಕೂಡಲೇ ಧಾವಿಸಿ ಆಕೆಯನ್ನು ಹೊರಗೆಳೆದುಕೊಂಡಿದ್ದಾರೆ. ಕೂದಲೆಳೆ ಅಂತರದಲ್ಲಿ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.