ನವದೆಹಲಿ: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ನಲ್ಲಿ ಇಂದು ವಿಚಾರಣೆ ನಡೆಯಲಿದ್ದು, ಕೋರ್ಟ್ ನೀಡಲಿರುವ ಆದೇಶದ ಬಗ್ಗೆ ಕುತೂಹಲ ಮೂಡಿದೆ.
ಕುಡಿಯಲಷ್ಟೇ ಕಾವೇರಿ ನದಿ ನೀರನ್ನು ಬಳಸಬೇಕೆಂದು ಕರ್ನಾಟಕ ವಿಧಾನಮಂಡಲದ ಉಭಯ ಸದನಗಳಲ್ಲಿ ಕೈಗೊಂಡಿರುವ ನಿರ್ಣಯದ ಪ್ರತಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದು, ಸೆಪ್ಟಂಬರ್ 20 ರಂದು ನೀಡಿರುವ ಆದೇಶವನ್ನು ಮಾರ್ಪಾಟು ಮಾಡಬೇಕೆಂದು ಕೋರಲಾಗಿದೆ. ಇದಕ್ಕೆ ತಮಿಳುನಾಡು ಆಕ್ಷೇಪಣೆ ಸಲ್ಲಿಸಿದ್ದು, ಮೊದಲು ಸೆಪ್ಟಂಬರ್ 20 ರಂದು ನೀಡಿರುವ ಆದೇಶ ಪಾಲಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಲು ಕೋರಿದೆ.
ಸುಪ್ರೀಂ ಕೋರ್ಟ್ ವಿಭಾಗೀಯ ಪೀಠದಲ್ಲಿ ಜಸ್ಟೀಸ್ ದೀಪಕ್ ಮಿಶ್ರಾ, ಜಸ್ಟೀಸ್ ಉದಯ್ ಲಲಿತ್ ಅವರಿಂದ ವಿಚಾರಣೆ ನಡೆಯಲಿದ್ದು, ಕರ್ನಾಟಕದ ಪಾಲಿಗೆ ಸುಪ್ರೀಂ ಕೋರ್ಟ್ ನೀಡಲಿರುವ ಆದೇಶ ನಿರ್ಣಾಯಕವಾಗಲಿದೆ.