ವ್ಯಕ್ತಿಯೊಬ್ಬ ಕಳೆದ ಮೂರು ವರ್ಷಗಳಿಂದ ಮಹಿಳೆಯಂತೆ ವೇಷ ಧರಿಸಿ ಅಕ್ರಮ ದಂಧೆ ನಡೆಸುತ್ತಿದ್ದು, ತಮಗೆ ಸಿಕ್ಕ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಇದೀಗ ವಂಚಕನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಈ ಘಟನೆ ನಡೆದಿದ್ದು, ಅವಿನಾಶ್ ಅಲಿಯಾಸ್ ಗೋಲ್ಡಿ ಎಂಬಾತ ಅಗತ್ಯವಿರುವವರಿಗೆ ನಕಲಿ ದಾಖಲೆ ಒದಗಿಸುವ ಕೆಲಸ ಮಾಡುತ್ತಿದ್ದನಲ್ಲದೇ ಇದಕ್ಕಾಗಿ ಸರ್ಕಾರದ ಹಲವು ಇಲಾಖೆಯ ನಕಲಿ ಸ್ಟಾಂಪ್ ಗಳನ್ನು ಮಾಡಿಸಿಕೊಂಡಿದ್ದ. ಅಲ್ಲದೇ ಬಿಹಾರದಲ್ಲಿ ಈಗ ಪಾನ ನಿಷೇಧ ಜಾರಿಯಲ್ಲಿರುವುದರಿಂದ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ.
ಮಹಿಳೆಯಂತೆ ವೇಷ ಧರಿಸುತ್ತಿದ್ದ ಅವಿನಾಶ್, ಇದಕ್ಕಾಗಿ ತನ್ನ ಹೆಸರನ್ನು ಮೋನಿಕಾ ಕುಮಾರಿ ಎಂದು ಬದಲಾಯಿಸಿಕೊಂಡಿದ್ದ. ಜೊತೆಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಖಾತೆಯನ್ನೂ ತೆರೆದಿದ್ದ. ಮೂರು ವರ್ಷಗಳಿಂದಲೂ ಈತ ಅಕ್ರಮ ದಂಧೆ ನಡೆಸುತ್ತಿದ್ದರೂ ಸಿಕ್ಕಿ ಬಿದ್ದಿರಲಿಲ್ಲ. ಆದರೆ ಇತ್ತೀಚೆಗೆ ಅನಾಮಧೇಯ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅದರ ಆಧಾರದ ಮೇಲೆ ಈತನನ್ನು ಬಂಧಿಸಿರುವ ಪೊಲೀಸರು ಈತನ ಅಕ್ರಮ ದಂಧೆಯ ಒಂದೊಂದೇ ವಿವರಗಳನ್ನು ಕಲೆ ಹಾಕುತ್ತಿದ್ದಾರೆ.