ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಕೆಲ ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಹೈದರಾಬಾದ್ ನಲ್ಲಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತಲ್ಲದೇ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದರಿಂದ ಭಾರೀ ನಷ್ಟವೂ ಸಂಭವಿಸಿದೆ.
ಈ ಮಧ್ಯೆ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವ ಹುಚ್ಚಿಗೆ ಬಿದ್ದ ಕೆಲ ಯುವಕರು, ನಕಲಿ ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು, ಇದು ನಿಜವಾದ ವಿಡಿಯೋ ಎಂದು ಭಾವಿಸಿ ಕೆಲ ಟಿವಿ ಚಾನೆಲ್ ನವರು ಪ್ರಸಾರವನ್ನೂ ಮಾಡಿದ್ದಾರೆ.
ಹೈದರಾಬಾದಿನ ನಾಚಾರಂ ನಲ್ಲಿ ವಾಹನವೊಂದು ಗುಂಡಿಯೊಳಗೆ ಸಿಲುಕಿದಾಗ ಅದರ ಪಕ್ಕದಲ್ಲಿ ಹಾದು ಹೋಗುತ್ತಿರುವ ಯುವಕ, ನೀರಿನಲ್ಲಿ ಕಣ್ಮರೆಯಾಗುವ ದೃಶ್ಯ ಈ ವಿಡಿಯೋದಲ್ಲಿದ್ದು, ಆತನನ್ನು ರಕ್ಷಿಸಲಾಗಿದೆ ಎಂಬ ಸಂದೇಶವನ್ನು ವಿಡಿಯೋ ಕೆಳಗಡೆ ಬರೆಯಲಾಗಿತ್ತು. ಆದರೆ ಪೊಲೀಸರು ತನಿಖೆ ನಡೆಸಿದ ವೇಳೆ ನಾಚಾರಂ ನಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲವೆಂಬುದು ಕಂಡು ಬಂದಿದೆ. ಒಬ್ಬಾತ ನೀರಿಗೆ ಬಿದ್ದಾಗ ಕೆಲವರು ಆತನನ್ನು ರಕ್ಷಿಸಲು ಮುಂದಾಗಿದ್ದು, ಆದರೆ ಕುಡಿದ ಮತ್ತಿನಲ್ಲಿ ಆತ ಬೇಕೆಂದೇ ಬಿದ್ದಿದ್ದನೆಂಬ ಅಂಶವೂ ಬೆಳಕಿಗೆ ಬಂದಿದೆ.