ಮದ್ಯದ ಮತ್ತಿನಲ್ಲಿದ್ದ ಮೂವರು ವಿದ್ಯಾರ್ಥಿಗಳು ಮೆಟ್ರೋ ರೈಲು ಏರಲು ಮುಂದಾದ ವೇಳೆ ಅವರನ್ನು ಭದ್ರತಾ ಸಿಬ್ಬಂದಿ ತಡೆದಾಗ ರಾದ್ದಾಂತ ಮಾಡಿದ್ದಾರೆ. ಅಲ್ಲದೇ ಪಾಕಿಸ್ತಾನ ಪರ ಘೋಷಣೆ ಕೂಗುವ ಮೂಲಕ ಇತರೆ ಪ್ರಯಾಣಿಕರನ್ನು ಕೆಲ ಕಾಲ ಆತಂಕಕ್ಕೀಡು ಮಾಡಿದ್ದಾರೆ.
ನವದೆಹಲಿಯ ವಿಶ್ವವಿದ್ಯಾಲಯ ಮೆಟ್ರೋ ಸ್ಟೇಷನ್ ನಲ್ಲಿ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಸ್ನೇಹಿತನೊಬ್ಬನ ಹುಟ್ಟು ಹಬ್ಬದ ಪಾರ್ಟಿಗೆ ತೆರಳಿದ್ದ ಈ ಮೂವರು ವಿದ್ಯಾರ್ಥಿಗಳು ಮೆಟ್ರೋ ರೈಲು ಏರಲು ಮುಂದಾಗಿದ್ದಾರೆ.
ಆದರೆ ಇವರುಗಳು ಕಂಠಪೂರ್ತಿ ಕುಡಿದು ತೂರಾಡುತ್ತಿದ್ದ ಕಾರಣ ಭದ್ರತಾ ಸಿಬ್ಬಂದಿ ರೈಲು ಏರದಂತೆ ತಡೆದಿದ್ದಾರೆ. ಇದರಿಂದ ಆಕ್ರೋಶಗೊಂಡ ಮೂವರು ಅವರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಅಲ್ಲದೇ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಕೂಡಲೇ ಅವರುಗಳನ್ನು ತಮ್ಮ ವಶಕ್ಕೆ ಪಡೆದ ರೈಲ್ವೇ ಸುರಕ್ಷತಾ ಸಿಬ್ಬಂದಿ ವಿಚಾರಣೆ ನಡೆಸಿದಾಗ ಮೂವರು ಯುವಕರು ಉತ್ತರ ಪ್ರದೇಶ ಸರ್ಕಾರದ ಹಿರಿಯ ಅಧಿಕಾರಿಗಳ ಮಕ್ಕಳೆಂದು ತಿಳಿದುಬಂದಿದೆ. ಅಷ್ಟರಲ್ಲಾಗಲೇ ಅವರುಗಳ ಮದ್ಯದ ಅಮಲು ಇಳಿದಿದ್ದು, ಎಚ್ಚರಿಕೆ ನೀಡಿದ ರೈಲ್ವೇ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.