ಪ್ರೀತಿಸುತ್ತಿದ್ದ ವ್ಯಕ್ತಿಗೆ ಯುವತಿ, ತನ್ನನ್ನು ವಿವಾಹವಾಗುವಂತೆ ಒತ್ತಾಯಿಸಿದ್ದೇ ಮುಳುವಾಗಿ ಪರಿಣಮಿಸಿದೆ. ಆಕೆಯಿಂದ ದೂರವಾಗಲು ಮಾಡಬಾರದ ಕೃತ್ಯ ಮಾಡಿದಾತ ಈಗ ಜೈಲು ಪಾಲಾಗಿದ್ದಾನೆ.
ದೆಹಲಿಯ ಮಂಗಲಪುರಿ ಏರಿಯಾದಲ್ಲಿ ಈ ಘಟನೆ ನಡೆದಿದ್ದು, ಸುಲ್ತಾನ್ ಪುರ್ ಮಜ್ರಾ ಗ್ರಾಮದ 24 ವರ್ಷದ ರಾಹುಲ್ ಎಂಬಾತ 18 ವರ್ಷದ ಯುವತಿಯನ್ನು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ ಇತ್ತೀಚಗೆ ಆಕೆಯಿಂದ ದೂರವಾಗಲು ಆತ ಮುಂದಾಗಿದ್ದನೆನ್ನಲಾಗಿದೆ.
ಯುವತಿ ಪದೇ ಪದೇ ಕರೆ ಮಾಡುತ್ತಿದ್ದ ಕಾರಣ, ಆಕೆಯನ್ನು ಭೇಟಿಯಾಗಲು ಬಂದ ರಾಹುಲ್ ಮಾತುಕತೆ ವೇಳೆ ಆಕೆಯೊಂದಿಗೆ ವಿವಾಹವಾಗಲು ನಿರಾಕರಿಸಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ರಾಹುಲ್ ಚಾಕುವಿನಿಂದ ಆಕೆಯ ಕತ್ತು ಸೀಳಿ ಪರಾರಿಯಾಗಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ಆಕೆಯ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದು, ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಈಗ ಆರೋಪಿ ರಾಹುಲ್ ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.