ಭಾರತ ಕ್ರಿಕೆಟ್ ತಂಡ, ಕಾನ್ಪುರದಲ್ಲಿ ನ್ಯೂಜಿಲ್ಯಾಂಡ್ ವಿರುದ್ದ ತನ್ನ 500 ನೇ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಇದು ಭಾರತದ 500 ನೇ ಟೆಸ್ಟ್ ಪಂದ್ಯವಾಗಿದ್ದ ಕಾರಣ ಇದನ್ನು ಸ್ಮರಣೀಯವಾಗಿಸಲು ಬಿಸಿಸಿಐ, ಭಾರತ ತಂಡವನ್ನು ಮುನ್ನಡೆಸಿದ್ದ ನಾಯಕರಿಗೆ ಪಂದ್ಯ ಆರಂಭಕ್ಕೂ ಮುನ್ನ ಸನ್ಮಾನ ಸಮಾರಂಭವನ್ನು ಏರ್ಪಡಿಸಿತ್ತು.
ಆದರೆ ಈ ಸಮಾರಂಭಕ್ಕೆ ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್, ಗುಂಡಪ್ಪ ವಿಶ್ವನಾಥ್, ಬಿಷನ್ ಸಿಂಗ್ ಬೇಡಿ ಸೇರಿದಂತೆ ಕೆಲವರು ಆಗಮಿಸಿರಲಿಲ್ಲ. ಇದೀಗ ರಾಹುಲ್ ದ್ರಾವಿಡ್ ಹಾಗೂ ವೀರೇಂದ್ರ ಸೆಹ್ವಾಗ್ ಸಮಾರಂಭಕ್ಕೆ ಗೈರು ಹಾಜರಾಗಿದ್ದಕ್ಕೆ ಕಾರಣ ಬಹಿರಂಗವಾಗಿದೆ.
ಪ್ರಸ್ತುತ ಭಾರತ ಎ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ರಾಹುಲ್ ದ್ರಾವಿಡ್ ತಂಡದ ಜೊತೆಗಿದ್ದಾರೆ. ಅದೇ ರೀತಿ ವೀರೇಂದ್ರ ಸೆಹ್ವಾಗ್ ಚಾರಿಟಿ ಪಂದ್ಯಕ್ಕಾಗಿ ಇಂಗ್ಲೆಂಡ್ ನಲ್ಲಿದ್ದು, ಕ್ರಿಕೆಟ್ ಯುನೈಟೆಡ್ XI ತಂಡದ ಪರ ಆಟವಾಡುತ್ತಿದ್ದಾರೆ. ಸಮಾರಂಭದ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಹಾಗೂ ವೀರೇಂದ್ರ ಸೆಹ್ವಾಗ್ ವಿದೇಶದಲ್ಲಿದ್ದ ಕಾರಣ ಗೈರು ಹಾಜರಾಗಿದ್ದರೆಂದು ಹೇಳಲಾಗಿದೆ.