ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್ ಹಾಗೂ ಫೇಸ್ ಬುಕ್ ವಿರುದ್ದ ದೆಹಲಿಯ ಇಬ್ಬರು ವಿದ್ಯಾರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ವಾಟ್ಸಾಪ್ ತನ್ನ ಬಳಕೆದಾರರ ಮಾಹಿತಿಗಳನ್ನು ಫೇಸ್ ಬುಕ್ ಜೊತೆ ಹಂಚಿಕೊಳ್ಳಲು ಮುಂದಾಗಿರುವುದನ್ನು ಆಕ್ಷೇಪಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
19 ವರ್ಷದ ಕಾರ್ಮಾಣ್ಯ ಸಿಂಗ್ ಸರೀನ್ ಹಾಗೂ 22 ವರ್ಷದ ಶ್ರೇಯಾ ಸೇಥಿ, ವಾಟ್ಸಾಪ್ ಗೌಪ್ಯವಾಗಿಡಬೇಕಾದ ತನ್ನ ಬಳಕೆದಾರರ ಮಾಹಿತಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳಲು ಮುಂದಾಗಿರುವ ಫೇಸ್ ಬುಕ್ ಗೆ ಒದಗಿಸಲು ಮುಂದಾಗಿರುವುದು ನಿಯಮಬಾಹಿರ ಎಂದು ಹೇಳಿದ್ದಾರೆ. ಈ ಕುರಿತು ಈಗ ದೆಹಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.
ವಾಟ್ಸಾಪ್ ಪರ ಹಾಜರಾಗಿದ್ದ ವಕೀಲರು, ತಮ್ಮ ಕಕ್ಷಿದಾರರು ಬಳಕೆದಾರರ ಫೋನ್ ನಂಬರ್ ಹಾಗೂ ಹೆಸರನ್ನು ಮಾತ್ರ ಫೇಸ್ ಬುಕ್ ಜೊತೆ ಹಂಚಿಕೊಳ್ಳುತ್ತದೆ. ಇತರೆ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲವೆಂದಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಂಗೀಕರಿಸಿರುವ ನ್ಯಾಯಾಲಯ ವಾಟ್ಸಾಪ್, ಫೇಸ್ ಬುಕ್, ಕೇಂದ್ರ ಸರ್ಕಾರ ಹಾಗೂ ಟ್ರಾಯ್ ಗೆ ನೋಟೀಸ್ ನೀಡಿದ್ದು, ವಾರದೊಳಗಾಗಿ ಈ ಕುರಿತು ಸ್ಪಷ್ಟನೆ ನೀಡಬೇಕೆಂದು ಸೂಚಿಸಿದೆ.