ವ್ಯಕ್ತಿಯೊಬ್ಬ ಗೆಳತಿಯೊಂದಿಗೆ ಕಾರಿನಲ್ಲಿ ಬರುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿದ್ದು, ಗೆಳತಿ ಸ್ಥಳದಲ್ಲೇ ಮೃತಪಟ್ಟರೆ ಆಕೆಯೊಂದಿಗಿದ್ದಾತ ಮೂರು ದಿನಗಳ ಕಾಲ ರಕ್ಷಣೆಗಾಗಿ ಮೊರೆಯಿಡುತ್ತಾ ಕಾರಿನಲ್ಲೇ ಸಿಲುಕಿಕೊಂಡಿದ್ದು, ಈಗ ರಕ್ಷಣೆ ಮಾಡಲಾಗಿದೆ.
ಘಟನೆ ಅಮೆರಿಕಾದ ಇಂಡಿಯಾನಾದಲ್ಲಿ ನಡೆದಿದ್ದು, ಕೆವಿನ್ ಬೆಲ್ ಎಂಬಾತ ತನ್ನ ಗೆಳತಿ ನಿಕ್ಕಿ ರೀಡ್ ಜೊತೆ ಪೆನ್ಸಿಲ್ವೇನಿಯಾಕ್ಕೆ ಕಾರಿನಲ್ಲಿ ತೆರಳುತ್ತಿದ್ದ. ಈ ವೇಳೆ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದು ಆಳದ ಕಮರಿಗೆ ಉರುಳಿದೆ. ನಿಕ್ಕಿ ಸ್ಥಳದಲ್ಲೇ ಸಾವನ್ನಪ್ಪಿದರೆ ಚಾಲಕನ ಸ್ಥಾನದಲ್ಲಿದ್ದ ಕೆವಿನ್ ನ ಬಲಗಾಲು ಮುರಿತಕ್ಕೊಳಗಾಗಿದೆ.
ಇಬ್ಬರ ಕುರಿತು ಎರಡು ದಿನಗಳಾದರೂ ಯಾವುದೇ ಸುಳಿವು ಸಿಗದ ಕಾರಣ ಆತಂಕಗೊಂಡ ಸಂಬಂಧಿಗಳು, ಸ್ನೇಹಿತರು ಹುಡುಕುವ ಪ್ರಯತ್ನ ಮಾಡಿದ್ದಾರೆ. ಆದರೆ ಕಾರು ಆಳವಾದ ಕಮರಿಗೆ ಬಿದ್ದಿದ್ದ ಕಾರಣ ಯಾರ ಗಮನಕ್ಕೂ ಬಂದಿಲ್ಲ. ಮೂರು ದಿನಗಳ ಕಾಲ ಗೆಳತಿಯ ಶವದೊಂದಿಗೆ ಕಾರಿನಲ್ಲೇ ಇದ್ದ ಕೆವಿನ್, ಪ್ರಯಾಸಪಟ್ಟು ಕೊನೆಗೂ ಹೊರ ಬರುವಲ್ಲಿ ಯಶಸ್ವಿಯಾಗಿದ್ದಾನೆ. ಮುರಿದ ಕಾಲಿನೊಂದಿಗೆ ತೆವಳುತ್ತಾ ಹೈವೇಗೆ ಬಂದ ಆತ, ದಾರಿಹೋಕರ ಸಹಾಯದೊಂದಿಗೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾನೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರಲ್ಲದೇ ಕಾರನ್ನು ಮೇಲಕ್ಕೆತ್ತಿ, ಅದರೊಳಗಿದ್ದ ನಿಕ್ಕಿಯ ಶವವನ್ನು ಹೊರ ತೆಗೆದಿದ್ದಾರೆ.