ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ತಮಿಳುನಾಡು ಮೂಲದ ಉದ್ಯಮಿಗೆ ಸೇರಿದ್ದ ಕೆ.ಪಿ.ಎನ್. ಟ್ರಾವೆಲ್ಸ್ ನ 42 ಬಸ್ ಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಪ್ರಚೋದನೆ ನೀಡಿದ್ದ ಆರೋಪದ ಮೇಲೆ ಬಂಧಿತಳಾಗಿರುವ ಯಾದಗಿರಿ ಮೂಲದ ಭಾಗ್ಯಶ್ರೀ ನೀಡಿರುವ ಹೇಳಿಕೆ ಶಾಕ್ ಆಗುವಂತಾಗಿದೆ.
ಸಂಘಟನೆಯೊಂದರ ಜೊತೆ ಗುರುತಿಸಿಕೊಂಡಿದ್ದ ಈಕೆ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದಾಗ ಬಿರಿಯಾನಿ ಕೊಡಿಸುವುದಾಗಿ ಕೆಲವರು ಹೇಳಿದ್ದರಿಂದ ತಾನು ಭಾಗವಹಿಸಿದ್ದೆ ಹಾಗೂ ಬಸ್ ಗಳಿಗೆ ಬೆಂಕಿ ಹಚ್ಚುವ ಸಂದರ್ಭದಲ್ಲಿ ಇದ್ದುದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆಂದು ಹೇಳಲಾಗಿದೆ.
ಕೆ.ಪಿ.ಎನ್. ಟ್ರಾವೆಲ್ಸ್ ನ ಬಸ್ ಗಳಿಗೆ ಬೆಂಕಿ ಹಚ್ಚುವ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೆಲವರು, ತಮ್ಮ ಮೊಬೈಲ್ ನಲ್ಲಿ ದೃಶ್ಯವನ್ನು ಸೆರೆ ಹಿಡಿದಿದ್ದು, ಈ ದೃಶ್ಯಾವಳಿಯನ್ನು ಆಧರಿಸಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಮಹಿಳೆಯೊಬ್ಬಳು ತಮಗೆ ಪ್ರಚೋದಿಸುತ್ತಿದ್ದುದ್ದಾಗಿ ಅವರು ಹೇಳಿಕೆ ನೀಡಿದ್ದು, ಬಳಿಕ ಭಾಗ್ಯಶ್ರೀಯನ್ನು ವಶಕ್ಕೆ ಪಡೆಯಲಾಗಿತ್ತು. ಆಕೆ, ಬಿರಿಯಾನಿ ಆಸೆಗಾಗಿ ತಾನು ಹೋಗಿದ್ದಾಗಿ ಹೇಳಿಕೆ ನೀಡಿರುವುದು ಅಚ್ಚರಿಯನ್ನುಂಟು ಮಾಡಿದೆ. ಈ ಮಧ್ಯೆ ಸರ್ಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದ್ದು, ತನಿಖೆ ತೀವ್ರಗೊಂಡಿದೆ.