ಮುಂಬೈನಲ್ಲಿ ಗಣಪತಿ ವಿಸರ್ಜನೆ ವೇಳೆ ಸಿಡಿಸಿದ ಪಟಾಕಿ ತಗುಲಿ ಎರಡು ಫ್ಲಾಟ್ ಗಳಿಗೆ ಬೆಂಕಿ ಬಿದ್ದಿದೆ. ಮಾಲ್ಡಾದ ಭೂಮಿ ಪಾರ್ಕ್ ನಲ್ಲಿರುವ ಎರಡು ಫ್ಲಾಟ್ ಗಳಿಗೆ ಬೆಂಕಿ ತಗುಲಿದೆ.
ಸಂಭ್ರಮಾಚರಣೆ ವೇಳೆ ಸಿಡಿಸಿದ ರಾಕೆಟ್ 6ನೇ ಮಹಡಿಯಲ್ಲಿರುವ ರೊಸಾರಿಯೋ ಡಿ ಮೆಲ್ಲೋ ಹಾಗೂ ಡೊಮೆನಿಕ್ ಪೆರೆಯರಾ ಅವರ ಮನೆ ಮೇಲೆ ಬಂದು ಬಿದ್ದಿದೆ. ತಕ್ಷಣ ಅವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರಾದ್ರೂ ಅಷ್ಟರಲ್ಲಾಗಲೇ ಮನೆಯ ಬಾಲ್ಕನಿ ಸುಟ್ಟು ಕರಕಲಾಗಿತ್ತು.
ಸುತ್ತಮುತ್ತಲ ನಿವಾಸಿಗಳೆಲ್ಲ ಭಯದಿಂದ ಮೇಲಿನ ಮಹಡಿಗೆ ಓಡಿ ಹೋದ್ರು. ಮನೆಯ ತುಂಬ ಹೊಗೆ ಆವರಿಸಿದ್ದರಿಂದ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯ್ತು. ನಿರ್ಲಕ್ಷ್ಯದಿಂದ್ಲೇ ಈ ಅವಘಡ ಸಂಭವಿಸಿದೆ ಅಂತಾ ಅಲ್ಲಿನ ನಿವಾಸಿಗಳು ದೂರಿದ್ದಾರೆ.
ಭವಿಷ್ಯದಲ್ಲಿ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವುದಾಗಿ ಅಪಾರ್ಟ್ ಮೆಂಟ್ ಮಾಲೀಕರು ಭರವಸೆ ನೀಡಿದ್ದಾರೆ. ಈ ಅವಘಡದ ಬಗ್ಗೆ ಇನ್ನೂ ಅಧಿಕೃತವಾಗಿ ಪ್ರಕರಣ ದಾಖಲಾಗಿಲ್ಲ.