ಬೆಂಗಳೂರು: ಕಾವೇರಿ ಹೋರಾಟದ ಕಿಚ್ಚಿಗೆ ಮತ್ತೊಬ್ಬ ಅಮಾಯಕ ಬಲಿಯಾಗಿದ್ದಾನೆ. ಹೋರಾಟ ಹಿಂಸೆಗೆ ತಿರುಗಿ, ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಹಾರಿಸಿದ ಗುಂಡಿಗೆ ಉಮೇಶ್ ಎಂಬಾತ ಮೃತಪಟ್ಟಿದ್ದರು.
ಸುಂಕದಕಟ್ಟೆಯಲ್ಲಿ ಲಾಠಿ ಚಾರ್ಜ್ ಸಂದರ್ಭದಲ್ಲಿ ಮಹಡಿಯಿಂದ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ ತುಮಕೂರು ಜಿಲ್ಲೆ ಕುಣಿಗಲ್ ನ ಕುಮಾರ್ ಎಂಬುವವರು ಇಂದು ಮಧ್ಯಾಹ್ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕುಮಾರ್ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದು, ಕೆಲಸ ಮುಗಿಸಿ ಮನೆಗೆ ಹೋಗುವಾಗ, ಸುಂಕದಕಟ್ಟೆಯಲ್ಲಿ ಗಲಭೆ ನಿಯಂತ್ರಣಕ್ಕೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಆಗ, ಕುಮಾರ್ ಕಟ್ಟಡವೊಂದನ್ನು ಹತ್ತಿದ್ದು, ಪೊಲೀಸರು ಬೆನ್ನಟ್ಟಿದ್ದರಿಂದ 3 ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ ಎಂದು ಹೇಳಲಾಗಿದೆ.
ಅವರ ತಲೆ, ಕಾಲು, ಬೆನ್ನು ಸೇರಿದಂತೆ ದೇಹದ ಅನೇಕ ಭಾಗಗಳಿಗೆ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವವಾಗಿದೆ. ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಆಸ್ಪತ್ರೆಯ ಬಳಿ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ. ಸೂಕ್ತ ಪರಿಹಾರ ನೀಡಬೇಕೆಂದು ಸಂಬಂಧಿಕರು ಒತ್ತಾಯಿಸಿದ್ದಾರೆ.