ಬೆಂಗಳೂರು: ಕಾವೇರಿ ಕಿಚ್ಚು ಜೋರಾಗುತ್ತಿರುವಂತೆಯೇ, ಬೆಂಗಳೂರಿನ ಹಲವು ಕಡೆಗಳಲ್ಲಿ ಕರ್ಫ್ಯೂ ಮತ್ತೆ ಕೆಲವೆಡೆ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಕರ್ಫ್ಯೂ ಹಾಗೂ ನಿಷೇಧಾಜ್ಞೆಯಿಂದಾಗಿ ಮದುವೆ ಮೊದಲಾದ ಸಮಾರಂಭಗಳಿಗೆ ತೊಂದರೆಯಾಗಿದೆ. ಮದುವೆ ನಿಲ್ಲಿಸಲು ಸಾಧ್ಯವಾಗದೇ ಕುಟುಂಬದವರ ಸಮ್ಮುಖದಲ್ಲೇ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಘಟನೆ ವರದಿಯಾಗಿದೆ. ಅತ್ತಿಬೆಲೆ ಬಳಿ ಭಾವಿ ದಂಪತಿ ನಡೆದುಕೊಂಡೇ ಬೆಂಗಳೂರಿನಿಂದ ತಮಿಳುನಾಡಿನ ಕಡೆಗೆ ಹೆಜ್ಜೆ ಹಾಕಿದ್ದಾರೆ. ಇವರು ಬೆಂಗಳೂರಿನಲ್ಲಿ ನೆಲೆಸಿದ್ದು, ನಾಳೆ ರಾಮೇಶ್ವರಂನಲ್ಲಿ ಮದುವೆ ಆಯೋಜನೆಗೊಂಡಿತ್ತು.
ಗಡಿಭಾಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿರುವುದರಿಂದ ಬೆಂಗಳೂರಿನಿಂದ ವಧು, ವರ ಹಾಗೂ ಸುಮಾರು 40 ಮಂದಿ ಬಂಧುಗಳು ನಡೆದುಕೊಂಡೇ ಹೊಸೂರು ಕಡೆಗೆ ಹೋಗಿದ್ದಾರೆ. ಅಲ್ಲಿಂದ ವಾಹನದಲ್ಲಿ ರಾಮೇಶ್ವರಂಗೆ ತೆರಳಿದ್ದಾರೆ ಎನ್ನಲಾಗಿದೆ.