ಮಂಡ್ಯ: ಕಾವೇರಿ ನದಿ ನೀರಿಗಾಗಿ ಮಂಡ್ಯದಲ್ಲಿ ನಡೆಯುತ್ತಿರುವ ಹೋರಾಟ ಮುಂದುವರೆದಿದ್ದು, ಸಂಜಯ್ ವೃತ್ತದಲ್ಲಿ ಮಹಿಳೆಯರು, ಮಕ್ಕಳು ಪ್ರತಿಭಟನೆ ನಡೆಸಿದ್ದಾರೆ.
ಮಧ್ಯಾಹ್ನದ ವೇಳೆಗೆ ಪ್ರತಿಭಟನೆ ಕಾವು ಜೋರಾಗಿದ್ದು, ನೂರಾರು ಎತ್ತಿನ ಗಾಡಿಗಳೊಂದಿಗೆ ಆಗಮಿಸಿದ ರೈತರು, ಸುಪ್ರೀಂ ಕೋರ್ಟ್ ಆದೇಶದಂತೆ, ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ನಿಲುವಿಗೆ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ತಡೆಯಿಂದಾಗಿ ಮಂಡ್ಯದ ಅನೇಕ ಮಾರ್ಗಗಳಲ್ಲಿ ಸಂಚಾರಕ್ಕೆ ತೊಂದರೆಯಾಗಿತ್ತು. ಇದಲ್ಲದೇ, ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಡ್ಯಾಂ ಸಮೀಪ ಪ್ರತಿಭಟನೆ ನಡೆಸಲಾಗಿದೆ.
ಸೋಮವಾರದಿಂದಲೂ ಮಂಡ್ಯದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮಂಡ್ಯ, ರಾಮನಗರ ಮೊದಲಾದ ಕಡೆಗಳಲ್ಲಿ ಪ್ರತಿಭಟನೆ, ರಸ್ತೆ ತಡೆ ನಡೆಸಲಾಗಿದೆ.