ಮಾಸ್ಕೋ: ಮದ್ಯ ಸೇವನೆ ಅತಿಯಾದರೆ ಏನೆಲ್ಲಾ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ರಷ್ಯಾದಲ್ಲಿ ನಡೆದ ಈ ಪ್ರಕರಣ ಉದಾಹರಣೆಯಾಗಿದೆ. ಒಂದೇ ಒಂದು ಬಾಟಲ್ ಮದ್ಯಕ್ಕಾಗಿ ಮಗಳನ್ನೇ ಮಾರಿದ ಘಟನೆ ವರದಿಯಾಗಿದೆ.
ಕುಡಿತದ ಚಟವಿದ್ದವರು ಹಣ ಖಾಲಿಯಾದಾಗ, ಮನೆಯಲ್ಲಿದ್ದ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ರಷ್ಯಾದಲ್ಲಿ ಮಹಿಳೆಯೊಬ್ಬಳು, ಮದ್ಯ ಸೇವನೆಗೆ ಹಣವಿಲ್ಲದ ಕಾರಣ, ತನ್ನ 10 ವರ್ಷದ ಪುತ್ರಿಯನ್ನೇ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಿದ್ದಾಳೆ. ಬಾಲಕಿಯನ್ನು ಕೊಟ್ಟು, ತನಗೆ ಪ್ರಿಯವಾದ 104 ರೂ. ಬೆಲೆಯ ವೋಡ್ಕಾ ಬಾಟಲ್ ಪಡೆದುಕೊಂಡಿದ್ದಾಳೆ. ಬಾಲಕಿಯನ್ನು ಖರೀದಿಸಿದ ದುರುಳ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ತನ್ನ ಕಣ್ಣೆದುರಿನಲ್ಲೇ ಮಗಳ ಮೇಲೆ ಅತ್ಯಾಚಾರ ನಡೆಯುತ್ತಿದ್ದರೂ, ಮದ್ಯವ್ಯಸನಿ ಅಮ್ಮ ಎಣ್ಣೆ ಹೊಡೆಯುವುದರಲ್ಲೇ ಮಗ್ನವಾಗಿದ್ದಾಳೆ. ಬಾಲಕಿ ಅಳುತ್ತಾ ಹೊರ ಬಂದು ನಿಂತಾಗ, ಸಾರ್ವಜನಿಕರು ಗಮನಿಸಿ, ಆಸ್ಪತ್ರೆಗೆ ಸೇರಿಸಿದ್ದಾರೆ.
ಬಾಲಕಿಯನ್ನು ಮಾರಿದ ತಾಯಿ, ಷರತ್ತಿಗೆ ಒಪ್ಪಿದ ನಂತರವೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆರೋಪಿ ಹೇಳಿದ್ದಾನೆ. ತಾಯಿ ಹಾಗೂ ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.