ಮಂಡ್ಯ: ರಸ್ತೆಯಲ್ಲೇ ಹೆಣ್ಣುಮಗುವಿಗೆ ಜನ್ಮ ನೀಡಿದ ಮಹಿಳೆಯೊಬ್ಬಳು, ಅದನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಲೆತ್ನಿಸಿದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆದಿದೆ. ಈಕೆಯನ್ನು ಕಂಡ ಸಾರ್ವಜನಿಕರು ಆಸ್ಪತ್ರೆಗೆ ಸೇರಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಕನಕಪುರ ತಾಲ್ಲೂಕಿನ ಹಳ್ಳಿಯೊಂದರ ನಿವಾಸಿಯಾಗಿರುವ ಮಹಿಳೆಯ ಗಂಡ ಗಾರೆ ಕೆಲಸ ಮಾಡಿಕೊಂಡಿದ್ದಾನೆ. ಈಕೆಗೆ ಮೊದಲ ಮಗು ಗಂಡಾಗಿದ್ದು, ಅದನ್ನು ಸಹೋದರಿಯ ಮನೆಯಲ್ಲಿ ಬಿಟ್ಟಿದ್ದಾಳೆ. ಗರ್ಭಿಣಿಯಾಗಿದ್ದ ಆಕೆ, ಮಳವಳ್ಳಿಯ ಸಾರ್ವಜನಿಕ ಆಸ್ಪತ್ರೆ ಸಮೀಪದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅದನ್ನು ಅಲ್ಲೇ ಬಿಟ್ಟು ಹೊರಟಿದ್ದಾಳೆ. ಹೀಗೆ ಮಹಿಳೆ ನವಜಾತ ಶಿಶುವನ್ನು ಬಿಟ್ಟು ಹೋಗುವುದನ್ನು ಕಂಡ ಸಾರ್ವಜನಿಕರು ಆಸ್ಪತ್ರೆಗೆ ಸೇರಿಸಿದ್ದಾರೆ.
ಬಡತನ ಇರುವ ಕಾರಣ ಮಗುವನ್ನು ಸಾಕಲು ಆಗುವುದಿಲ್ಲ. ನನಗೆ ಮಗು ಬೇಡ ಎಂದು ಮಹಿಳೆ ಹೇಳಿದ್ದಾಳೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಇಬ್ಬರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.