ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಠಾಣೆಯ ಮುಂದೆ ನಿಲ್ಲಿಸಿದ್ದ ಜೀಪನ್ನು ಚಾಲಕನ ಸಮೇತ ‘ಕಳವು’ ಮಾಡಿದ್ದಾರೆ. ಈ ಘಟನೆ ನಡೆದಿರುವುದು ಬಿಹಾರದ ಪಾಟ್ನಾದಲ್ಲಿ. ಅಂದ ಹಾಗೇ ಹಿರಿಯ ಅಧಿಕಾರಿ ತಮ್ಮದೇ ಇಲಾಖೆಯ ಜೀಪ್ ‘ಕಳವು’ ಮಾಡಲು ಕಾರಣವೇನು ಗೊತ್ತಾ? ಮುಂದೆ ಓದಿ.
ಪಾಟ್ನಾ ಜಿಲ್ಲೆಯ ಸೀನಿಯರ್ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಮನು ಮಹಾರಾಜ್ ತಮ್ಮ ಕಾರ್ಯ ದಕ್ಷತೆಗೆ ಹೆಸರುವಾಸಿ. ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೋ ಇಲ್ಲವೋ ಎಂಬುದನ್ನು ಆಗಾಗ ದಿಢೀರ್ ಭೇಟಿ ನೀಡಿ ಪರಿಶೀಲಿಸುತ್ತಿರುತ್ತಾರೆ.
ಶುಕ್ರವಾರ ರಾತ್ರಿ 11-30 ರ ಸುಮಾರಿಗೆ ಕಾರು ಬಿಟ್ಟು ತಮ್ಮ ಬೈಕ್ ಏರಿದ ಮನು ಮಹಾರಾಜ್, ಕೋತ್ವಾಲಿ ಪೊಲೀಸ್ ಠಾಣೆಗೆ ಬಂದಿದ್ದಾರೆ. ಠಾಣೆಯಲ್ಲಿ ಯಾರೊಬ್ಬ ಪೊಲೀಸರು ಅವರ ಕಣ್ಣಿಗೆ ಬಿದ್ದಿಲ್ಲ. ಜೊತೆಗೆ ಅಲ್ಲಿ ನಿಲ್ಲಿಸಿದ್ದ ಐದು ಜೀಪುಗಳ ಪೈಕಿ ಒಂದು ಜೀಪಿನಲ್ಲಿ ಚಾಲಕ ಹಿಂದಿನ ಸೀಟಿನಲ್ಲಿ ಮಲಗಿರುವುದು ಕಂಡು ಬಂದಿದೆ. ಮನು ಮಹಾರಾಜ್ ಆ ಜೀಪ್ ಸ್ಟಾರ್ಟ್ ಮಾಡಿಕೊಂಡು ಸತತ ಮೂರು ಗಂಟೆಗಳ ಕಾಲ ಪಾಟ್ನಾದ ರಸ್ತೆಗಳಲ್ಲಿ ಸುತ್ತಿದರೂ ತಮ್ಮ ಠಾಣೆಯ ಮುಂದೆ ನಿಲ್ಲಿಸಿದ್ದ ಇಲಾಖೆಯ ಜೀಪ್ ಕಳುವಾಗಿರುವುದು ಪೊಲೀಸರ ಗಮನಕ್ಕೆ ಬಂದಿಲ್ಲ. ಅಲ್ಲದೇ ಜೀಪಿನಲ್ಲಿ ಮಲಗಿದ್ದ ಚಾಲಕನಿಗೆ ಎಚ್ಚರವೂ ಆಗಿಲ್ಲ. ತಮ್ಮ ಮನೆಗೆ ಬಂದ ಮನು ಮಹಾರಾಜ್, ಕೋತ್ವಾಲಿ ಠಾಣೆಗೆ ಕರೆ ಮಾಡಿ ಎಲ್ಲ ಜೀಪುಗಳು ಇವೆಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲಿದ್ದಾತ ಜೀಪುಗಳು ಇರುವುದಾಗಿ ಹೇಳಿದ್ದಾನೆ. ಮತ್ತೊಮ್ಮೆ ಕರೆ ಮಾಡಿ ಸರಿಯಾಗಿ ಪರೀಕ್ಷಿಸಲು ಹೇಳಿದಾಗ ಒಂದು ಜೀಪ್ ಕಾಣಿಸುತ್ತಿಲ್ಲವೆಂದು ಆತ ತಿಳಿಸಿದ್ದಾನೆ. ಇದೀಗ ಪೊಲೀಸರ ನಿರ್ಲಕ್ಷ್ಯತನದ ಕುರಿತು ತನಿಖೆಗೆ ಆದೇಶಿಸಿರುವ ಮನು ಮಹಾರಾಜ್, ಜೀಪ್ ಚಾಲಕನನ್ನು ಸಸ್ಟೆಂಡ್ ಮಾಡಿದ್ದಾರೆ.