ಉತ್ತರ ಪ್ರದೇಶದ ಝಾನ್ಸಿಯಲ್ಲಿ ಮೊಬೈಲ್ ಲಾಕ್ ಪ್ಯಾಟರ್ನ್ ಅನ್ನು ಹೇಳಿಲ್ಲ ಅನ್ನೋ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಹತ್ಯೆ ಮಾಡಿಸಿದ್ದಾನೆ.
ಝಾನ್ಸಿ ನಿವಾಸಿ 29 ವರ್ಷದ ಪೂನಂ ವರ್ಮಾ ಕೊಲೆಯಾದ ನತದೃಷ್ಟೆ. ಪೂನಂ ಮತ್ತಾಕೆಯ ಪತಿ ವಿನೀತ್ ಇಬ್ಬರೂ ಕಾನ್ಪುರದವರು. ಈ ದಂಪತಿಗೆ 4 ವರ್ಷದ ಮಗಳಿದ್ದಾಳೆ. ಚಿಕ್ಕದೊಂದು ಉದ್ಯಮ ನಡೆಸ್ತಾ ಇದ್ದ ವಿನೀತ್, ಝಾನ್ಸಿ ಮತ್ತು ಕಾನ್ಪುರ ಎರಡೂ ಕಡೆ ಓಡಾಡಿಕೊಂಡಿದ್ದ.
ಕಳೆದ ತಿಂಗಳಷ್ಟೆ ಪೂನಂ ಸ್ಮಾರ್ಟ್ ಫೋನ್ ಖರೀದಿಸಿದ್ದಳಂತೆ. ಕೈಯಲ್ಲಿ ಸ್ಮಾರ್ಟ್ ಫೋನ್ ಬಂದ್ಮೇಲೆ ಅವಳ ನಡತೆಯೇ ಬದಲಾಗಿತ್ತು ಎನ್ನುತ್ತಾನೆ ವಿನೀತ್. ಯಾರೂ ನೋಡಬಾರದು ಅನ್ನೋ ಕಾರಣಕ್ಕೆ ಪೂನಂ ಮೊಬೈಲ್ ಗೆ ಕೋಡ್ ಹಾಕಿ ಲಾಕ್ ಮಾಡಿದ್ದಳಂತೆ.
ಆ ರಹಸ್ಯ ಕೋಡ್ ಹೇಳಿಲ್ಲ ಅನ್ನೋ ಕಾರಣಕ್ಕೆ ವಿನೀತ್ ಪತ್ನಿಯನ್ನು ಕೊಲ್ಲಲು ಸ್ಕೆಚ್ ಹಾಕಿದ್ದ. ಸ್ನೇಹಿತರಾದ ಲಕ್ಷ್ಮಣ್ ಮತ್ತು ಕಮಲ್ ಗೆ 80,000 ರೂಪಾಯಿ ಸುಪಾರಿ ಕೊಟ್ಟಿದ್ದ. ಆಗಸ್ಟ್ 29ರಂದು ಸ್ನೇಹಿತರು ಬರ್ತಾರೆ ಅವರ ಬಳಿ ಲ್ಯಾಪ್ ಟಾಪ್ ಕೊಟ್ಟು ಕಳಿಸು ಅಂತಾ ವಿನೀತ್ ಪತ್ನಿಗೆ ಹೇಳಿದ್ದ. ರಾತ್ರಿ ಮನೆಗೆ ಬಂದ ಲಕ್ಷ್ಮಣ್ ಮತ್ತು ಕಮಲ್, ಪೂನಂಳನ್ನು ಕೊಂದು ಹಾಕಿದ್ದಾರೆ.
ಇದು ದರೋಡೆಕೋರರ ಕೃತ್ಯವೆಂದು ಬಿಂಬಿಸಲು ಮನೆಯಲ್ಲಿದ್ದ ಆಭರಣಗಳನ್ನು ಹೊತ್ತೊಯ್ದಿದ್ದಾರೆ. ಬೆಳಗ್ಗೆ ತಾಯಿಯ ಮೃತದೇಹ ನೋಡಿ ಗಾಬರಿಯಾದ ಪುಟ್ಟ ಮಗಳು ಅಳಲಾರಂಭಿಸಿದಾಗ ಅಕ್ಕಪಕ್ಕದವರು ಬಂದು ನೋಡಿದ ವೇಳೆ ಕೊಲೆ ವಿಚಾರ ಬೆಳಕಿಗೆ ಬಂದಿತ್ತು. ಪೂನಂ ಕೊಲೆಯಾದ ದಿನ ವಿನೀತ್ ಕಾನ್ಪುರದಲ್ಲಿದ್ದ. ತನಗೇನೂ ಗೊತ್ತಿಲ್ಲ ಎಂದೇ ನಾಟಕವಾಡುತ್ತಿದ್ದ. ಪೊಲೀಸರು ಅವನನ್ನು ಕರೆತಂದು ವಿಚಾರಣೆ ನಡೆಸಿದಾಗ ತಾನೇ ಹೆಂಡತಿಯನ್ನು ಕೊಲೆ ಮಾಡಿಸಿರೋದಾಗಿ ತಪ್ಪೊಪ್ಪಿಕೊಂಡಿದ್ದಾನೆ. ವಿನೀತ್ ಮತ್ತು ಪೂನಂಳ ಮೊಬೈಲ್ ಮೋಹದಿಂದ 4 ವರ್ಷದ ಮಗು ಅನಾಥವಾಗಿದೆ.