ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ನಾಳಿನ ‘ಕರ್ನಾಟಕ ಬಂದ್’ ಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಬಂದ್ ಸಂಪೂರ್ಣ ಯಶಸ್ವಿಯಾಗುವ ನಿರೀಕ್ಷೆಯಿದೆ.
ಅನುದಾನರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟ ನಾಳಿನ ಬಂದ್ ಗೆ ಬೆಂಬಲ ಸೂಚಿಸಿದ್ದು, ಶಾಲೆಗಳು ನಾಳೆ ನಡೆಯುವುದಿಲ್ಲವೆಂದು ತಿಳಿಸಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಶಾಲಾ- ಕಾಲೇಜಿಗೆ ಆಡಳಿತ ಮಂಡಳಿಗಳು ರಜೆ ಘೋಷಿಸಿವೆ.
ಪೆಟ್ರೋಲ್ ಬಂಕ್ ಮಾಲೀಕರ ಸಂಘವೂ ಬಂದ್ ಗೆ ಬೆಂಬಲ ಸೂಚಿಸಿದ್ದು, ನಾಳೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಪೆಟ್ರೋಲ್ ಬಂಕ್ ಗಳು ಕಾರ್ಯ ನಿರ್ವಹಿಸುವುದಿಲ್ಲವೆಂದು ತಿಳಿದುಬಂದಿದೆ. ಅಗತ್ಯ ವಸ್ತುಗಳ ಪೂರೈಕೆಗೆ ಬಂದ್ ನಿಂದ ವಿನಾಯಿತಿ ನೀಡಲಾಗಿದ್ದು, ಹಾಲು ಎಂದಿನಂತೆ ಪೂರೈಕೆಯಾಗಲಿದೆ. ಆಸ್ಪತ್ರೆ, ಅಂಬುಲೆನ್ಸ್, ಔಷಧ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಬಿಎಂಟಿಸಿ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ಗಳು ರಸ್ತೆಗಿಳಿಯುವುದು ಅನುಮಾನ. ಆಟೋ ಸಂಚಾರವೂ ಸ್ಥಗಿತಗೊಳ್ಳಲಿದೆ. ಅಲ್ಲದೇ ಹೋಟೆಲ್, ಚಿತ್ರಮಂದಿರಗಳು ಸಂಪೂರ್ಣ ಬಂದ್ ಆಗಲಿವೆ.