ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ರಿಲಯೆನ್ಸ್ ಜಿಯೋ ಜಾಹೀರಾತಿನಲ್ಲಿ ಮೋದಿ ಫೋಟೋ ಹಾಕಿರೋದು ಪ್ರತಿಪಕ್ಷಗಳಿಗೆ ಆಹಾರವಾಗಿದೆ. ಸಂವಿಧಾನಾತ್ಮಕ ಹುದ್ದೆಯಲ್ಲಿರುವ ನರೇಂದ್ರ ಮೋದಿ ವ್ಯಾಪಾರಿ ಕಂಪನಿಯೊಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದು ಎಲ್ಲರ ಹುಬ್ಬೇರಿಸಿದೆ.
ಈ ಬಗ್ಗೆ ಟ್ಟಿಟ್ಟರ್ ನಲ್ಲಿ ಬಿಸಿ ಬಿಸಿ ಚರ್ಚೆಯಾಗ್ತಾ ಇದೆ. ಜಿಯೋ, ಮೋದಿ ಅವರ ಡಿಜಿಟಲ್ ಇಂಡಿಯಾ ಕನಸಿನ ಭಾಗ ಅಂತಾ ಜಾಹೀರಾತಿನಲ್ಲಿ ಬರೆಯಲಾಗಿದೆ. ರಿಲಯೆನ್ಸ್ ಹಾಗೂ ಪ್ರಧಾನಿ ಮೋದಿ ಅವರಿಗಿರುವ ಸಂಬಂಧವೇನು? ಮೋದಿ ರಿಲಯೆನ್ಸ್ ಜಿಯೋ ರಾಯಭಾರಿಗಳೇ ಅನ್ನೋದು ಕೆಲವರ ಪ್ರಶ್ನೆ.
ಸಿಎಂ ಅರವಿಂದ್ ಕೇಜ್ರಿವಾಲ್ ಅವರಂತೂ ಪ್ರಧಾನಿಯನ್ನು ಮಿ.ರಿಲಯೆನ್ಸ್ ಅಂತಾ ಕರೆದಿದ್ದಾರೆ. ಮೋದಿ ಅವರು ರಿಲಯೆನ್ಸ್ ಗಾಗಿ ಮಾಡೆಲಿಂಗ್ ಮಾಡ್ತಿದ್ದಾರೆ, 2019 ರಲ್ಲಿ ಕಾರ್ಮಿಕರು ನಿಮಗೆ ಬುದ್ಧಿ ಕಲಿಸ್ತಾರೆ ಅಂತಾ ಕೇಜ್ರಿವಾಲ್ ಕಿಡಿಕಾರಿದ್ದಾರೆ. ಜಾಹೀರಾತಿನಲ್ಲಿ ಫೋಟೋ ಬಳಸಿಕೊಳ್ಳಲು ಪ್ರಧಾನಿ ಅನುಮತಿ ಪಡೆಯಲಾಗಿದೆಯೇ ಅಂತಾ ಕಾಂಗ್ರೆಸ್ ನ ಅಜಯ್ ಮಾಕೆನ್ ಪ್ರಶ್ನಿಸಿದ್ದಾರೆ. ವಾಣಿಜ್ಯ ಉದ್ದೇಶಕ್ಕಾಗಿ ಅನುಮತಿಯಿಲ್ಲದೆ ಹೆಸರು ಅಥವಾ ಭಾವಚಿತ್ರವನ್ನು ಬಳಸಿಕೊಳ್ಳುವಂತಿಲ್ಲ ಅಂತಾ ಕಾನೂನಿನಲ್ಲಿ ಹೇಳಲಾಗಿದೆ ಅನ್ನೋದು ಅವರ ವಾದ.