ಭಾರತದ ಬೆಳ್ಳಿತಾರೆ ಪಿ.ವಿ. ಸಿಂಧು ಅವರನ್ನು ಸಿ.ಆರ್.ಪಿ.ಎಫ್ ವಿಶಿಷ್ಟ ರೀತಿಯಲ್ಲಿ ಗೌರವಿಸಲಿದೆ. ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಿಂಧು ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ.
ಜೊತೆಗೆ ಸಿ.ಆರ್.ಪಿ.ಎಫ್ ಕಮಾಂಡೆಂಟ್ ರ್ಯಾಂಕ್ ಅನ್ನು ಕೂಡ ನೀಡಿ ಗೌರವಿಸುತ್ತಿದೆ. ಈಗಾಗ್ಲೇ ಸಿಂಧುಗೆ ಕಮಾಂಡೆಂಟ್ ಹುದ್ದೆ ನೀಡುವ ಅಧಿಕೃತ ಪ್ರಸ್ತಾವನೆಯನ್ನು ಕೇಂದ್ರ ಗೃಹ ಇಲಾಖೆಗೆ ಸಿ.ಆರ್.ಪಿ.ಎಫ್ ಕಳಿಸಿಕೊಟ್ಟಿದೆ. ಗೃಹ ಸಚಿವಾಲಯದ ಸಮ್ಮತಿ ಬಳಿಕ ಸಿಂಧು ಅವರಿಗೆ ಕಮಾಂಡೆಂಟ್ ಸಮವಸ್ತ್ರ ಮತ್ತು ಬ್ಯಾಡ್ಜ್ ಗಳನ್ನು ನೀಡಿ ಸನ್ಮಾನಿಸಲಾಗುತ್ತದೆ.
ಕಮಾಂಡೆಂಟ್ ಹುದ್ದೆ ಎಸ್ಪಿ ಹುದ್ದೆಗೆ ಸರಿಸಮನಾದದ್ದು, ಅವರು 1000 ಬೆಟಾಲಿಯನ್ ಗಳ ಮುಖ್ಯಸ್ಥರಾಗಿರುತ್ತಾರೆ. ದೇಶದ ವಿವಿಧ ಭದ್ರತಾ ಪಡೆಗಳು ಸಿಂಧು ಅವರನ್ನು ಈ ಹುದ್ದೆಗಾಗಿ ಆಯ್ಕೆ ಮಾಡಿವೆ, ಕಾರಣ ಅವರು ಸೈನಿಕರಿಗೆ ಪ್ರೇರಣೆಯಾಗಬಲ್ಲರು ಮತ್ತು ಮಹಿಳಾ ಸಬಲೀಕರಣದ ಸಂದೇಶವನ್ನೂ ಸಾರಿದಂತಾಗುತ್ತದೆ ಅನ್ನೋದು. ಬ್ರಾಂಡ್ ಅಂಬಾಸಿಡರ್ ಕೂಡ ಆಗಿರೋದ್ರಿಂದ ಸಿಂಧು, ಆಗಾಗ ಯೋಧರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೆಲ ವರ್ಷಗಳ ಹಿಂದಷ್ಟೆ ಬಿ.ಎಸ್.ಎಫ್, ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿತ್ತು.