ಸಾಮಾನ್ಯವಾಗಿ ಬಹುತೇಕ ಹೆಣ್ಣುಮಕ್ಕಳಿಗೆ ತಮ್ಮ ಮದುವೆಯಲ್ಲಿ ತಾನು ಮೈತುಂಬ ಬಂಗಾರ ಹಾಕಿಕೊಳ್ಳಬೇಕೆಂಬ ಹಂಬಲವಿರುತ್ತದೆ. ಆದರೆ ಇಲ್ಲೊಬ್ಬ ಯುವತಿ ಬಯಸಿದ್ದೇನು ಅಂತ ಕೇಳಿದ್ರೆ ಅಚ್ಚರಿಪಡ್ತೀರಿ.
ಕೇರಳದ ಸಹ್ಲಾ ನೆಚಿಯಿಲ್ ವಧುದಕ್ಷಿಣೆಯ ನೆಪದಲ್ಲಿ ನಡೆಯುವ ಸುಲಿಗೆಯ ವಿರುದ್ಧ ಜಾಗೃತಿ ಮೂಡಿಸಲು ಬಂಗಾರದ ಬದಲಾಗಿ 50 ಪುಸ್ತಕಗಳನ್ನು ಪಡೆದಿದ್ದಾಳೆ. ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಪೊಲಿಟಿಕಲ್ ಸೈನ್ಸ್ ನಲ್ಲಿ ಪೋಸ್ಟ್ ಗ್ರ್ಯಾಜುಯೇಟ್ ಆಗಿರುವ ಈಕೆ, ಎಲ್ಲರಿಗೂ ಮಾದರಿಯಾಗಿದ್ದಾಳೆ.
“ನಾನು ಗಂಡು ಮತ್ತು ಹೆಣ್ಣಿನ ಕಡೆಯವರು ನಡೆಸುವ ಬಂಗಾರದ ವಿನಿಮಯಕ್ಕೆ ಕಡಿವಾಣ ಹಾಕಬೇಕೆಂದು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಬಂಗಾರದ ವಿನಿಮಯ ನಡೆಯದೇ ಮದುವೆ ನಡೆಯಲು ಸಾಧ್ಯ ಎಂಬುದನ್ನು ಮುಸ್ಲಿಂ ಹಾಗೂ ಎಲ್ಲ ಸಮುದಾಯದ ಜನರಿಗೆ ನಾನು ತೋರಿಸಿದ್ದೇನೆ” ಎಂದಿದ್ದಾರೆ ಸಹ್ಲಾ.
ಸಹ್ಲಾ ತನಗೆ ಬೇಕಾದ 50 ಪುಸ್ತಕಗಳ ಪಟ್ಟಿಯನ್ನು ತನ್ನ ಭಾವೀ ಗಂಡನಿಗೆ ಕೊಟ್ಟಿದ್ದಾಳೆ. ತನ್ನ ಫಿಯಾನ್ಸಿಯ ಈ ನಿರ್ಧಾರದಿಂದ ಸಂತಸಗೊಂಡ ಅನೀಸ್ ಆಕೆ ಕೇಳಿದ್ದ ಎಲ್ಲ 50 ಪುಸ್ತಕಗಳನ್ನು ತಂದುಕೊಟ್ಟಿದ್ದಾನೆ. ಸಹ್ಲಾ ಹಾಗೂ ಅನೀಸ್ ಅವರ ಮದುವೆ ಆಗಸ್ಟ್ 11 ರಂದು ಸರಳವಾಗಿ ನಡೆದಿದೆ.