ಅಪಾರ್ಟ್ಮೆಂಟ್ ಒಂದರ ಮ್ಯಾನ್ ಹೋಲ್ ಸ್ವಚ್ಚಗೊಳಿಸಲು ಇಳಿದಿದ್ದ ಮೂವರು ಕಾರ್ಮಿಕರೂ ಸೇರಿದಂತೆ ನಾಲ್ವರು ವಿಷಾನಿಲ ಸೇವಿಸಿ ಸಾವನ್ನಪ್ಪಿರುವ ದಾರುಣ ಘಟನೆ ಹೈದರಾಬಾದಿನಲ್ಲಿ ನಡೆದಿದೆ.
ಹೈದರಾಬಾದಿನ ಮಾಧಪುರ್ ಏರಿಯಾದ ಅಯ್ಯಪ್ಪ ಸೊಸೈಟಿಯಲ್ಲಿನ ಮ್ಯಾನ್ ಹೋಲ್ ಸ್ವಚ್ಚಗೊಳಿಸಲು ಮೂವರು ಕಾರ್ಮಿಕರು ಕೆಳಗಿಳಿದಿದ್ದಾರೆ. ಎಷ್ಟು ಹೊತ್ತಾದರೂ ಅವರುಗಳು ಮೇಲೆ ಬಾರದ ಕಾರಣ ಸ್ಥಳೀಯ ನಿವಾಸಿ ಶ್ರೀನಿವಾಸ್ ಎಂಬವರು ಕೆಳಗಿಳಿದಿದ್ದು, ಅವರೂ ಕೂಡಾ ಸಾವನ್ನಪ್ಪಿದ್ದಾರೆ.
ಬಳಿಕ 108 ಅಂಬುಲೆನ್ಸ್ ಗೆ ಕರೆ ಮಾಡಿದ್ದು, ಧಾವಿಸಿ ಬಂದ ಸಿಬ್ಬಂದಿ ಪೈಕಿ ಓರ್ವ ಮ್ಯಾನ್ ಹೋಲ್ ಗೆ ಇಳಿದ ವೇಳೆ ಅಸ್ವಸ್ಥಗೊಂಡಿದ್ದಾರೆ. ಅವರನ್ನು ಈಗ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಹಲವು ದಿನಗಳಿಂದ ಮ್ಯಾನ್ ಹೋಲ್ ಮುಚ್ಚಿದ್ದು, ಇದರಿಂದ ಉಂಟಾಗಿದ್ದ ವಿಷಾನಿಲ ಸೇವಿಸಿ ನಾಲ್ವರು ಸಾವನ್ನಪ್ಪಿರಬಹುದೆಂದು ಹೇಳಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಗುತ್ತಿಗೆದಾರನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.