ಕಳೆದ ತಿಂಗಳು ರಾಜ್ಯಸಭಾ ಸದಸ್ಯತ್ವ ಹಾಗೂ ಬಿಜೆಪಿಗೆ ಗುಡ್ ಬೈ ಹೇಳಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು, ಮುಂದೆ ಯಾವ ಪಕ್ಷ ಸೇರಲಿದ್ದಾರೆಂಬ ಕುತೂಹಲಕ್ಕೆ ತೆರೆ ಬಿದ್ದಿದೆ.
ಶುಕ್ರವಾರದಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಸಿದ್ದು, ಆಮ್ ಆದ್ಮಿ ಪಾರ್ಟಿ ಸೇರುವ ಕುರಿತಂತೆ ಮಾತುಕತೆ ನಡೆಸಿದ್ದಾರೆಂದು ಹೇಳಲಾಗಿದೆ.
ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನವಜೋತ್ ಸಿಂಗ್ ಸಿದ್ದು, ಆಮ್ ಆದ್ಮಿ ಪಾರ್ಟಿ ಸೇರ್ಪಡೆಯಾಗಲಿದ್ದು, ಚುನಾವಣಾ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆನ್ನಲಾಗಿದೆ.
ಪಂಜಾಬ್ ವಿಧಾನಸಭಾ ಚುನಾವಣೆಗೆ ನವಜೋತ್ ಸಿಂಗ್ ಸಿದ್ದುರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸುವ ಕುರಿತು ಆಮ್ ಆದ್ಮಿ ಪಾರ್ಟಿ ಚಿಂತನೆ ನಡೆಸಿಲ್ಲವಾದರೂ ಚುನಾವಣಾ ಪ್ರಚಾರದ ವೇಳೆ ಸಿದ್ದು ಸ್ಟಾರ್ ಕ್ಯಾಂಪೇನರ್ ಆಗಲಿದ್ದಾರೆ. ಸಿದ್ದುರನ್ನು ಆಮ್ ಆದ್ಮಿ ಪಾರ್ಟಿಯಿಂದ ರಾಜ್ಯಸಭೆಗೆ ಆಯ್ಕೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ನವಜೋತ್ ಸಿಂಗ್ ರ ಪತ್ನಿ ನವಜೋತ್ ಕೌರ್ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿಯಿಂದ ಕಣಕ್ಕಿಳಿಯಲಿದ್ದಾರೆಂದು ಹೇಳಲಾಗಿದೆ.