ಬಾರ್ಮರ್: ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ರಾಷ್ಟ್ರಗೀತೆಗೆ ನಿರ್ಬಂಧ ಹೇರಿದ್ದು ವಿವಾದಕ್ಕೆ ಕಾರಣವಾಗಿತ್ತಲ್ಲದೇ ನಿರ್ಬಂಧ ಹೇರಿದ್ದನ್ನು ವಿರೋಧಿಸಿ ಶಾಲೆಯ ಕೆಲ ಶಿಕ್ಷಕರು ರಾಜೀನಾಮೆ ನೀಡಿದ್ದರು. ಈಗ ಮತ್ತೊಂದು ಶಾಲೆ ರಾಷ್ಟ್ರ ಗೀತೆಗೆ ನಿರ್ಬಂಧ ಹೇರಿರುವ ಘಟನೆ ರಾಜಸ್ತಾನದಲ್ಲಿ ನಡೆದಿದೆ.
ರಾಜಸ್ತಾನದ ಶಾಲೆಯೊಂದರಲ್ಲಿ ರಾಷ್ಟ್ರಗೀತೆ ಹಾಡಲು ನಿರ್ಬಂಧ ಹೇರಲಾಗಿದೆ. ಬಾರ್ಮರ್ ಜಿಲ್ಲೆಯ ಪಂಡಿ ಕಿ ಪಾರ್ ಗ್ರಾಮದ ಶಾಲೆಯೊಂದರಲ್ಲಿ ಆಡಳಿತ ಮಂಡಳಿಯ ಪ್ರಮುಖ, ಮೌಲಾನಾ ವಲಿ ಮಹಮ್ಮದ್ ಎಂಬಾತ, ಶಾಲೆಯಲ್ಲಿ ವಿದ್ಯಾರ್ಥಿಗಳು ರಾಷ್ಟ್ರ ಗೀತೆ ಹೇಳಬಾರದೆಂದು ನಿರ್ಬಂಧ ವಿಧಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಶಾಲೆಯ ಮಕ್ಕಳಿಗೆ ರಾಷ್ಟ್ರಗೀತೆ ಹೇಳದಂತೆ ಆಡಳಿತ ಮಂಡಳಿಯಿಂದಲೇ ಆದೇಶ ನೀಡಿರುವುದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಆದರೆ, ಈ ಆರೋಪವನ್ನು ತಳ್ಳಿ ಹಾಕಿರುವ ಶಾಲೆಯ ಮುಖ್ಯ ಶಿಕ್ಷಕ ಸಿರಾಜ್ ಅವರು, ಶಾಲೆಯಲ್ಲಿ ರಾಷ್ಟ್ರಗೀತೆ ಹೇಳಲಾಗುತ್ತಿದೆ. ಕೆಲವರು ಅಪಪ್ರಚಾರಕ್ಕಾಗಿ ಇಂತಹ ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.