ರಾಮನಗರ: ಆಹಾರ, ನೀರು ಹುಡುಕುತ್ತಾ ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡುವುದು ಹೊಸದೇನಲ್ಲ. ಹೀಗೆ ನಾಡಿಗೆ ಬರುವ ಪ್ರಾಣಿಗಳು, ಕೆಲವೊಮ್ಮೆ ಅನಾಹುತ ಸೃಷ್ಠಿಸುತ್ತವೆ. ರಾಮನಗರದಲ್ಲಿ ಚಿರತೆಯೊಂದು ಆತಂಕ ಮೂಡಿಸಿದ ಘಟನೆ ನಡೆದಿದೆ.
ತಡರಾತ್ರಿ ರಾಮನಗರ ತಾಲ್ಲೂಕಿನ ಬಾಳಲಿಂಗೇಗೌಡನ ದೊಡ್ಡಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದೆ. ಗ್ರಾಮದ ಜೋಗಿ ಸಿದ್ದೇಗೌಡ ಎಂಬುವವರ ಕೊಟ್ಟಿಗೆಗೆ ನುಗ್ಗಿದ ಚಿರತೆ ಕುರಿಯೊಂದನ್ನು ತಿಂದು ಹಾಕಿದ್ದು, ಇದನ್ನು ಗಮನಿಸಿದ ಮನೆಯವರು ಕೊಟ್ಟಿಗೆಯ ಬಾಗಿಲು ಹಾಕಿದ್ದಾರೆ. ಚಿರತೆ ಅಲ್ಲೇ ಬಂಧಿಯಾಗಿದ್ದು, ಹೊರಗೆ ಹೋಗಲು ಪ್ರಯತ್ನಿಸಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಬನ್ನೇರುಘಟ್ಟದಿಂದ ಅರವಳಿಕೆ ತಜ್ಞರನ್ನು ಕರೆಸಿ ಚಿರತೆಯನ್ನು ಸೆರೆ ಹಿಡಿಯಲು ಯೋಜಿಸಲಾಗಿದೆ ಎನ್ನಲಾಗಿದೆ. 1 ಕುರಿಯನ್ನು ತಿಂದಿರುವ ಚಿರತೆ ಕೊಟ್ಟಿಗೆಯಲ್ಲಿ ರಂಪಾಟ ನಡೆಸಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಲಾಗಿದೆ ಎನ್ನಲಾಗಿದೆ.